ಅಯೋಧ್ಯೆ ಭೂ ವ್ಯವಹಾರ: ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ಮಾಯಾವತಿ, ಪ್ರಿಯಾಂಕಾ ಗಾಂಧಿ ಆಗ್ರಹ
ಹೊಸದಿಲ್ಲಿ, ಡಿ. 23: ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ 2019 ನವೆಂಬರ್ 9ರಂದು ತೀರ್ಪು ಘೋಷಿಸಿದ ಬಳಿಕ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ರಾಜ್ಯ ಸರಕಾರದ ಅಧಿಕಾರಿಗಳ ಸಂಬಂಧಿಕರು ಭೂ ನಿವೇಶನ ಖರೀದಿಸಿದ್ದಾರೆ ಎಂದು ತನಿಖಾ ವರದಿ ಬಹಿರಂಗಪಡಿಸಿದ ವಿಷಯಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಮಂಗಳವಾರ ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕು ಹಾಗೂ ಈ ಭೂ ವ್ಯವಹಾರವನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಭೂ ವರ್ಗಾವಣೆ ಕುರಿತು ತನಿಖೆಗೆ ಆದೇಶ ನೀಡಿದ ಹಾಗೂ ವಾರದ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದ ಬಳಿಕ ಮಾಯಾವತಿ ಅವರು ಈ ಹೇಳಿಕೆ ನೀಡಿದ್ದಾರೆ.
ಈ ನಡುವೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಅಯೋಧ್ಯೆ ಭೂ ಹಗರಣದ ಕುರಿತು ಉತ್ತರಪ್ರದೇಶ ಸರಕಾರ ತನಿಖೆಗೆ ಆದೇಶಿಸಿರುವುದು ಕಣ್ಣೊರೆಸುವ ತಂತ್ರ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಬೇಕು. ಅಲ್ಲದೆ ಆದೇಶದಂತೆ ಅಯೋಧ್ಯೆಯಲ್ಲಿ ದೇವಾಲಯ ನಿರ್ಮಾಣವಾಗುತ್ತಿರುವಂತೆ ಮಧ್ಯೆ ಪ್ರವೇಶಿಸಬೇಕು ಎಂದು ಹೇಳಿದ್ದಾರೆ.
ಬಿಜೆಪಿಯನ್ನು ಗುರಿಯಾಗಿರಿಸಿ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯ ನಾಯಕರು ಲೂಟಿಯಲ್ಲಿ ತೊಡಗಿದ್ದಾರೆ. ಅಲ್ಲದೆ ಅವರು ಜನರ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘‘ಹಿಂದೂಗಳು ಸತ್ಯ ಪಥದಲ್ಲಿ ನಡೆಯುತ್ತಿದ್ದಾರೆ. ಹಿಂದುತ್ವವಾದಿಗಳು ಧರ್ಮದ ನೆಪದಲ್ಲಿ ದರೋಡೆ ಮಾಡುತ್ತಿದ್ದಾರೆ’’ ಎಂದ ಟ್ವೀಟ್ ಮಾಡಿದ್ದಾರೆ.