'ಈವರೆಗಿನ 47 ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರುಗಳಲ್ಲಿ ಕನಿಷ್ಠ 14 ಮಂದಿ ಬ್ರಾಹ್ಮಣರು'
ರಾಜ್ಯಸಭೆಯಲ್ಲಿ ಕೇರಳ ಸಂಸದ ಜಾನ್ ಬ್ರಿಟ್ಟಸ್ ► ಭಾಷಣಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶ್ಲಾಘನೆ

ಜಾನ್ ಬ್ರಿಟ್ಟಸ್
ಹೊಸದಿಲ್ಲಿ: ಭಾರತದ ಸಂವಿಧಾನದ ರೂವಾರಿ ಮತ್ತು ಮೊದಲ ಕಾನೂನು ಸಚಿವ ಡಾ. ಬಿ.ಆರ್.ಅಂಬೇಡ್ಕರ್ ಇದ್ದಿದ್ದರೆ, ನ್ಯಾಯಾಂಗದ ಸ್ವಾತಂತ್ರ್ಯವನ್ನು ದಮನಿಸಿರುವುದನ್ನು ಕಂಡು ಆಘಾತಕ್ಕೆ ಒಳಗಾಗುತ್ತಿದ್ದರು ಎಂದು ಕೇರಳ ಸಂಸದ ಜಾನ್ ಬ್ರಿಟ್ಟಸ್ ರಾಜ್ಯ ಸಭೆಯಲ್ಲಿ ಡಿ. 13ರಂದು ಮಾಡಿರುವ ತಮ್ಮ ಚೊಚ್ಚಲ ಭಾಷಣ ಈಗ ಚರ್ಚೆಗೆ ಗ್ರಾಸವಾಗಿದೆ.
"ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು ನಿವೃತ್ತಿಯ ಬಳಿಕ ಲಾಭದಾಯಕ ಹುದ್ದೆ ನಿರ್ವಹಿಸುವುದನ್ನು ನಿಷೇಧಿಸಲು ಅಂಬೇಡ್ಕರ್ ಬಯಸಿರಲಿಲ್ಲ ನಿಜ. ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ಈ ಚರ್ಚೆ ಬಂದಾಗ ಈ ನಿಲುವನ್ನು ಸ್ಪಷ್ಟಪಡಿಸಿದ್ದರು. ಆದರೆ ಇಂದು ಅವರು ಜೀವಂತ ಇದ್ದಿದ್ದರೆ, ನಿವೃತ್ತಿ ಬಳಿಕದ ಓಲೈಕೆ ವ್ಯವಸ್ಥೆಯ ಬಗ್ಗೆ ಅವರಿಗೆ ಅರಿವಾಗುತ್ತಿತ್ತು.. ಸದಸ್ಯ ಶಿಬ್ಬನ್ ಲಾಲ್ ಸಕ್ಸೇನಾ ಹೇಳಿದಂತೆ ನಿವೃತ್ತಿಯ ಬಳಿಕ ಉನ್ನತ ಹುದ್ದೆಗೆ ನೇಮಕ ಮಾಡುವ ಆಮಿಷ ಒಡ್ಡುವುದು ಕೊನೆಯಾಗದಿದ್ದರೆ, ಇದನ್ನು ಕಾರ್ಯಾಂಗ ಅಥವಾ ಅಧಿಕಾರದಲ್ಲಿರುವ ಪಕ್ಷ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಈ ವಿವೇಕದ ಮಾತುಗಳು ನಮ್ಮ ಕಿವಿಯಲ್ಲಿ ಅನುರಣಿಸಬೇಕು" ಎಂದು ಹೇಳಿದರು.
ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ (ವೇತನಗಳು ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ-2021ರ ಮೇಲಿನ ಚರ್ಚೆ ವೇಳೆ ಅವರು ನ್ಯಾಯಾಂಗದ ಸ್ವಾತಂತ್ರ್ಯ ಎಂಬ ವಿಷಯದ ಬಗ್ಗೆ ಸದನವನ್ನು ಉದ್ದೇಶಿಸಿ ಮಾತನಾಡಿದ್ದರು.
ಜಾನ್ ಬ್ರಿಟ್ಟಸ್ ಅವರ ಈ ಭಾಷಣಕ್ಕೆ ಅನಿರೀಕ್ಷಿತ ವಲಯದಿಂದ ಶ್ಲಾಘನೆಯೂ ಕೇಳಿ ಬಂದಿದೆ. ರಾಜ್ಯ ಸಭೆಯ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜಾನ್ ಬ್ರಿಟ್ಟಸ್ ಅವರ ಬಾಷಣವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಅದ್ಭುತ ಭಾಷಣ, ನನಗೆ ಕೇಳಿ ಬಾರಿ ಖುಷಿಯಾಯಿತು. ಆದರೆ ಆ ಭಾಷಣದ ಒಂದೇ ಒಂದು ಸಾಲನ್ನು ಯಾವುದೇ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿಲ್ಲ. ಅದನ್ನು ನೋಡಿ ನಿರಾಶೆಯಾಯಿತು ಎಂದು ವೆಂಕಯ್ಯ ನಾಯ್ಡು ಹೇಳಿದರು.
"ಈ ಮಸೂದೆಯ ಉದ್ದೇಶ ಪಿಂಚಣಿಯ ಮೊತ್ತ ಹೆಚ್ಚಿಸುವುದು ಎಂದು ಕಾನೂನು ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ. ಇದನ್ನು ನಾನು ಶ್ಲಾಘಿಸುತ್ತೇನೆ. ಆದರೆ ಇಲ್ಲಿ ಗಂಭೀರ ಲೋಪವಿದ್ದು, ಇಂಥ ವಿಷಯದ ಬಗ್ಗೆ ನಾವು ನಿರ್ಧಾರ ಕೈಗೊಂಡರೂ, ನ್ಯಾಯಮೂರ್ತಿಗಳ ನೇಮಕದ ವಿಚಾರದಲ್ಲಿ ನಮ್ಮ ಪಾತ್ರ ಇರುವುದಿಲ್ಲ. ವಿಶ್ವದ ಎಲ್ಲಿಯಾದರೂ ಇಂಥ ಸ್ಥಿತಿ ಇದೆಯೇ? ಖಂಡಿತಾ ಇಲ್ಲ. ನ್ಯಾಯಮೂರ್ತಿಗಳು ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದನ್ನು ಎಲ್ಲೂ ಕೇಳಿಲ್ಲ! ವಿಚಿತ್ರವೆಂದರೆ ಕಾನೂನು ಸಚಿವರು ಕೂಡಾ ಈ ಬಗ್ಗೆ ಖಚಿತ ನಿಲುವು ಹೊಂದಿಲ್ಲ" ಎಂದು ಜಾನ್ ಬ್ರಿಟ್ಟಸ್ ಹೇಳಿದರು.
ನಮಗೆ ಯಾವ ರೀತಿಯ ನ್ಯಾಯಾಧೀಶರು ಬರುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಾಗಬೇಕು. ಅವರ ಅರ್ಹತೆ, ಅವರ ಸಾಮರ್ಥ್ಯ, ಅವರ ಪ್ರಾಮಾಣಿಕತೆ ಏನು ಎಂಬುದು ಜನರಿಗೂ ಗೊತ್ತಾಗಬೇಕು. ಈ ವ್ಯವಸ್ಥೆ ನಿಗೂಢವಾಗಿದೆ ಏಕೆ ? ಅದರಲ್ಲಿ ಅಂತಹ ರಹಸ್ಯ ಏಕೆ ?
ಸರ್, ನಾನು ಒಬ್ಬ ಹೈಕೋರ್ಟ್ ನ್ಯಾಯಾಧೀಶರ ಪರಿಚಯ ಓದುತ್ತೇನೆ. ಇದು ಹೈಕೋರ್ಟ್ ನ ವೆಬ್ ಸೈಟ್ ನಲ್ಲೇ ಇತ್ತು. ನಾನು ಆ ನ್ಯಾಯಾಧೀಶರ ಹೆಸರು ಹೇಳುವುದಿಲ್ಲ. ಈ ನ್ಯಾಯಾಧೀಶರು ಇಂತಹ ಕಡೆ ಇಂತಹ ದಿನ ಹುಟ್ಟಿದರು, ಇವರು ನ್ಯಾಯಾಧೀಶರುಗಳ ಕುಟುಂಬದಿಂದಲೇ ಬಂದಿದ್ದಾರೆ, ಇವರ ಮುತ್ತಜ್ಜ ದೇಶದ ಮುಖ್ಯ ನ್ಯಾಯಾಧೀಶರಾಗಿದ್ದರು, ಇನ್ನೊಬ್ಬ ಅಜ್ಜ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿದ್ದರು, ಇನ್ನೊಬ್ಬ ಸಂಬಂಧಿಕ ಅಲ್ಲಿ ನ್ಯಾಯಾಧೀಶರಾಗಿದ್ದರು, ಇನ್ನೊಬ್ಬರು ಅಲ್ಲಿ ... ಇನ್ನೊಬ್ಬರು ಇಲ್ಲಿ... ಹೀಗೆ ಒಂದು ದೊಡ್ಡ ಪಟ್ಟಿಯೇ ಇತ್ತು ಅವರ ಪರಿಚಯದಲ್ಲಿ.
ಇಲ್ಲಿ ನಾವೆಲ್ಲ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುತ್ತೇವೆ. ಬಿಜೆಪಿಯವರು ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತದೆ ಎಂದು ಭಾರೀ ಜೋರಾಗಿ ಟೀಕಿಸುತ್ತಾರೆ. ಕನಿಷ್ಠ ಅವರು ಜನಾದೇಶ ಪಡೆದು ಇಲ್ಲಿ ಬಂದಿದ್ದಾರೆ. ಆದರೆ ನ್ಯಾಯಾಂಗದಲ್ಲಿ ಅತ್ಯಂತ ಸ್ಪಷ್ಟವಾಗಿ ಕುಟುಂಬದ ಆಧಾರದಲ್ಲಿ ನೇಮಕಾತಿಯಾಗುತ್ತಿದೆ. ನಾವು ಏಕೆ ಇದರ ಬಗ್ಗೆ ಬಾಯಿ ಬಿಡುತ್ತಿಲ್ಲ ? ನ್ಯಾಯಾಂಗದ ವಿಷಯ ಬರುವಾಗ ಅಲ್ಲಿ ನಮಗೆ ಎಲ್ಲರಿಗೂ ಪ್ರಾತಿನಿಧ್ಯ ಬೇಡವೇ ? ಸಂಪುಟದಲ್ಲಿ ಮಾತ್ರ ಪ್ರಾತಿನಿಧ್ಯ ಇದ್ದರೆ ಸಾಕೆ ? ನ್ಯಾಯಾಂಗದಲ್ಲಿ ಏಕೆ ಬೇಡ ? ಎಂದು ಜಾನ್ ಪ್ರಶ್ನಿಸಿದ್ದಾರೆ.
ಈವರೆಗಿನ 47 ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರುಗಳಲ್ಲಿ ಕನಿಷ್ಠ 14 ಮಂದಿ ಬ್ರಾಹ್ಮಣರು. 1950 ರಿಂದ 1970ರವರೆಗೆ ಸುಪ್ರೀಂ ಕೋರ್ಟ್ ನ ಗರಿಷ್ಟ ನ್ಯಾಯಾಧೀಶರ ಸಂಖ್ಯೆ 14 ಇತ್ತು, ಅದರಲ್ಲಿ 11 ಮಂದಿ ಬ್ರಾಹ್ಮಣರಾಗಿದ್ದರು.
ಇದೇ ಬಹಳ ಮುಖ್ಯ ವಿಷಯ. ಅಲ್ಲೇ ಇದೆ ಸಂಬಂಧ. ನ್ಯಾಯಾಂಗದಲ್ಲಿ ಎಲ್ಲ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ನಾನು ಹೇಳುತ್ತಿದ್ದೇನೆ. ಇದು ಬ್ರಾಹ್ಮಣರ ಬಗ್ಗೆ ಅಲ್ಲ. ನನಗೆ ಯಾವ ಜಾತಿ ವಿರುದ್ಧವೂ ದ್ವೇಷ ಇಲ್ಲ. 1980ರವರೆಗೆ ಹಿಂದುಳಿದ ವರ್ಗ ಹಾಗು ಪರಿಶಿಷ್ಟ ಜಾತಿಯಿಂದ ಯಾವುದೇ ನ್ಯಾಯಧೀಶ ಈ ದೇಶದ ಸುಪ್ರೀಂ ಕೋರ್ಟ್ ನಲ್ಲಿ ಇರಲಿಲ್ಲ ಎಂದರೆ ನೀವು ನಂಬುತ್ತೀರಾ ? ಎಂದು ಜಾನ್ ಪ್ರಶ್ನಿಸಿದ್ದಾರೆ.
ಎನ್ಜೆಎಸಿ ಪ್ರಸ್ತಾವವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಆದರೆ ಈ ಸರ್ಕಾರಕ್ಕೆ ಇದರಿಂದ ಅನುಕೂಲವಾಗಿದೆ. ಇದು ಒಂದರ್ಥದಲ್ಲಿ ವಿನಿಮಯ ಪದ್ಧತಿ. ಸರ್ಕಾರ ತನಗೆ ಅನುಕೂಲಕರ ಎನಿಸದವರ ನೇಮಕವನ್ನು ಯಶಸ್ವಿಯಾಗಿ ತಡೆದಿದೆ. ತಮಗೆ ಬೇಡದವರ ಹೆಸರುಗಳು ಪ್ರಸ್ತಾವವಾದಾಗ ಅಂಥ ಪ್ರಸ್ತಾವವನ್ನು ಸರ್ಕಾರ ವಿಳಂಬಿಸುತ್ತಿದೆ. ಕೆಲ ನ್ಯಾಯಮೂರ್ತಿಗಳನ್ನು ವಿನಾಕಾರಣ ವರ್ಗಾಯಿಸಲಾಗುತ್ತಿದೆ. ಇದು ಒಂದು ಶಿಕ್ಷೆ. ಆದರೆ ಕೆಲ ಮುಖ್ಯ ನ್ಯಾಯಮೂರ್ತಿಗಳು (ಜಮ್ಮು ಕಾಶ್ಮೀರದ ಸಿಜೆ ಪಂಕಜ್ ಮಿತ್ತಲ್) ಸಂವಿಧಾನಕ್ಕೆ ವಿರುದ್ಧವಾಗಿ ಜಾತ್ಯತೀತತೆ ವಿರುದ್ಧ ಮಾತನಾಡುತ್ತಿದ್ದಾರೆ. ನ್ಯಾಯಾಧೀಶರಾಗಲು ಯಾವ ವಯಸ್ಸಿನ ಮಾನದಂಡವೂ ಇಲ್ಲ. ಕೆಲವರನ್ನು ವಯಸ್ಸು ಕಡಿಮೆ ಎಂಬ ಕಾರಣಕ್ಕೆ ತಿರಸ್ಕರಿಸಿ, ರಾತ್ರೋರಾತ್ರಿ ಕೆಲವರನ್ನು ನೇಮಕ ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಅಖಿಲ್ ಖುರೇಷಿ ಅವರ ನೇಮಕಾತಿ ಪ್ರಸ್ತಾವವನ್ನು ತಳ್ಳಿಹಾಕಿದ ನಿದರ್ಶನವನ್ನು ವಿವರಿಸಿದರು.
ಅವರು (ಅಖಿಲ್ ಖುರೇಷಿ) ಮಾಡಿದ ಅಪರಾಧವಾದರೂ ಏನು? ತಮ್ಮ ಅಧಿಕಾರಾವಧಿಯಲ್ಲಿ ಅವರು ಒಬ್ಬ ಪ್ರಭಾವಿ ವ್ಯಕ್ತಿಯನ್ನು ಜೈಲಿಗೆ ಕಳುಹಿಸಿದ್ದೇ? ಅಥವಾ ಬೇರೇನು? ಎಂದು ಪ್ರಶ್ನಿಸಿದರು. ಸೊಹ್ರಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣದಲ್ಲಿ ಷಾಮೀಲಾದ ಆರೋಪದಲ್ಲಿ ನ್ಯಾಯಮೂರ್ತಿ ಖುರೇಶಿಯವರು ಹಾಲಿ ಗೃಹಸಚಿವ ಅಮಿತ್ ಶಾ ಅವರನ್ನು ಈ ಹಿಂದೆ ಜೈಲಿಗೆ ಕಳುಹಿಸಿದ್ದರು.
ಸಂವಿಧಾನದ ಪ್ರಕಾರ, ಹೈಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು ಯಾರ ಅಧೀನದಲ್ಲೂ ಇಲ್ಲ. ಸುಪ್ರೀಂ ಹಾಗೂ ಹೈಕೋರ್ಟ್ಗಳು ಸಂವಿಧಾನಾತ್ಮಕ ನ್ಯಾಯಾಲಯಗಳು. ಆದರೆ ಸುಪ್ರೀಂಕೋರ್ಟ್ ಕೊಲೀಜಿಯಂ, ಹೈಕೋರ್ಟ್ಗಳನ್ನು ಅಧೀನ ಸಂಸ್ಥೆಗಳಾಗಿ ಮಾಡಿಕೊಂಡಿವೆ. ಹೈಕೋರ್ಟ್ ನ್ಯಾಯಮೂರ್ತಿಗಳು ನೀಡುತ್ತಿರುವ ಹೇಳಿಕೆಗಳು ಅವರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಲು ಅರ್ಹರಾಗಿಸುತ್ತಿವೆ!" ಎಂದು ಮಾರ್ಮಿಕವಾಗಿ ನುಡಿದರು.
ಅವರ ಭಾಷಣದ ವೀಡಿಯೊ ಇಲ್ಲಿದೆ