ಕೇರಳದಲ್ಲಿ ಪಿಎಫ್‌ಐ ಸದಸ್ಯರ ವಿಚಾರಣೆಗೆ ಈ.ಡಿ.ಗೆ ನಿರ್ದೇಶ ನೀಡಲು ದಿಲ್ಲಿ ಹೈಕೋರ್ಟ್ ನಕಾರ
ಅಕ್ರಮ ಹಣ ವರ್ಗಾವಣೆ ಪ್ರಕರಣ
ಹೊಸದಿಲ್ಲಿ,ಡಿ.24: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಸದಸ್ಯರನ್ನು ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಜಾರಿ ನಿರ್ದೇಶನಾಲಯ(ಈ.ಡಿ.)ಕ್ಕೆ ನಿರ್ದೇಶ ನೀಡಲು ಶುಕ್ರವಾರ ನಿರಾಕರಿಸಿದ ದಿಲ್ಲಿ ಉಚ್ಚ ನ್ಯಾಯಾಲಯವು, ತನಿಖೆಯ ಕ್ರಮ ಮತ್ತು ವಿಧಾನವನ್ನು ನ್ಯಾಯಾಲಯವು ನಿರ್ದೇಶಿಸುವಂತಿಲ್ಲ ಎಂದು ಹೇಳಿದೆ.
ದಿಲ್ಲಿಯಲ್ಲಿ ಈ.ಡಿ. ಎದುರು ಹಾಜರಾಗುವಂತೆ ಮೂವರು ಪಿಎಫ್‌ಐ ಸದಸ್ಯರಿಗೆ ಸಮನ್ಸ್ ಹೊರಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾ. ಅನು ಮಲ್ಹೋತ್ರಾ ಅವರು, ಕೋವಿಡ್‌ನಿಂದಾಗಿ ಕೇರಳದಿಂದ ದಿಲ್ಲಿಗೆ ಪ್ರಯಾಣಿಸುವವರ ಮೇಲೆ ಯಾವುದೇ ನಿರ್ಬಂಧಗಳಿದ್ದರೆ ಮಾತ್ರ ಈ.ಡಿ.ಕೇರಳದಲ್ಲಿಯ ತನ್ನ ವಲಯ ಕಚೇರಿಯಲ್ಲಿ ವಿಚಾರಣೆಯನ್ನು ನಡೆಸಬೇಕು. ತನಿಖೆಯ ರೀತಿಯನ್ನು ನ್ಯಾಯಾಲಯವು ನಿರ್ದೇಶಿಸಲು ಸಾಧ್ಯವಿಲ್ಲ, ಅದು ನ್ಯಾಯಾಲಯದ ಕೆಲಸವೂ ಅಲ್ಲ. ಸದ್ಯಕ್ಕೆ ಪ್ರಯಾಣದ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ ಪೂರ್ವಾರ್ಧದಲ್ಲಿ ನಡೆಸಲಾಗಿದ್ದ ಶೋಧ ಕಾರ್ಯಾಚರಣೆಗೆ ಕಾರಣಗಳನ್ನು ಸಲ್ಲಿಸುವಂತೆ ಈ.ಡಿ.ಗೆ ನಿರ್ದೇಶ ನೀಡಲೂ ನ್ಯಾಯಾಲಯವು ನಿರಾಕರಿಸಿತು.
ದೇಶವಿರೋಧಿ ಚಟುವಟಿಕೆಗಳನ್ನು ನಡೆಸಲು ಕೇರಳದಲ್ಲಿ ಯುವಕರಿಗೆ ತರಬೇತಿ ನೀಡುತ್ತಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಪ್ರಕರಣವನ್ನು ದಾಖಲಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈ.ಡಿ.2018ರಲ್ಲಿ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಪ್ರಶ್ನಿಸಿ ಪಿಎಫ್‌ಐ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸುವಂತೆ ಉಚ್ಚ ನ್ಯಾಯಾಲಯವು ಡಿ.8ರಂದು ಈ.ಡಿ.ಗೆ ಸೂಚಿಸಿತ್ತು.
ಸಮನ್ಸ್ ಜಾರಿಗೊಂಡಿರುವ ಪಿಎಫ್‌ಐ ಕಾರ್ಯಕರ್ತರು ತನಿಖೆಯನ್ನು ಹೇಗೆ ನಡೆಸಬೇಕು ಎಂದು ತನಿಖಾ ಸಂಸ್ಥೆಗೆ ನಿರ್ದೇಶಿಸುವಂತಿಲ್ಲ ಎಂದು ವಾದಿಸಿದ ಈ.ಡಿ.ಪರ ವಕೀಲ ಅಮಿತ್ ಮಹಾಜನ ಅವರು, ವಿಚಾರಣೆಗಾಗಿ ದಿಲ್ಲಿಗೆ ಬರಲು ಪ್ರಾಮಾಣಿಕವಾದ ತೊಂದರೆಗಳಿದ್ದರೆ ಮತ್ತು ಅದರಿಂದ ತನಿಖೆಗೆ ಅಡ್ಡಿಯಾಗದಿದ್ದರೆ ಈ.ಡಿ. ಅದನ್ನು ಪರಿಗಣಿಸುತ್ತದೆ ಎಂದು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತನ್ನ ಕಕ್ಷಿದಾರರ ವಿಚಾರಣೆಯನ್ನು ಈ.ಡಿ. ತನ್ನ ಕೇರಳ ವಲಯ ಕಚೇರಿಯಲ್ಲಿ ನಡೆಸಬೇಕು, ಅಲ್ಲದೆ ಅವರು ದಿಲ್ಲಿಯ ನಿವಾಸಿಗಳಲ್ಲ, ಸ್ಥಳೀಯ ಭಾಷಾಜ್ಞಾನದ ಕೊರತೆಯೂ ಇದೆ ಎಂದು ಪಿಎಫ್‌ಐ ಪರ ವಕೀಲ ಅದಿತ್ ಪೂಜಾರಿ ವಾದಿಸಿದರು. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿಯಲ್ಲಿ ನಡೆಯಲಿದೆ.