ಅಮೃತಸರದ ಸಯಾಮಿ ಅವಳಿಗಳಿಗೆ ಮತದಾನ ಹಕ್ಕಿನ ನಂತರ ಈಗ ದೊರಕಿದೆ ಉದ್ಯೋಗ

Photo: Twitter/@ANI
ಅಮೃತಸರ್: ಅಮೃತಸರದ ಸಯಾಮಿ ಅವಳಿಗಳಾದ ಸೊಹ್ನಾ ಮತ್ತು ಮೊಹ್ನಾ ಅವರಿಗೆ ಮತದಾನ ಹಕ್ಕು ದೊರೆತ ನಂತರ ಇದೀಗ ಸರಕಾರಿ ಉದ್ಯೋಗವೂ ಒಲಿದು ಬಂದಿದೆ.
ಪಂಜಾಬ್ ರಾಜ್ಯ ವಿದ್ಯುತ್ ನಿಗಮ ನಿಯಮಿತ ಈ ಸಯಾಮಿ ಅವಳಿಗಳನ್ನು ರೆಗ್ಯುಲರ್ ಟಿ ಮೇಟ್ (ಆರ್ಟಿಎಂ) ಆಗಿ ನೇಮಿಸಿ ಅಮೃತಸರದ ಡೆಂಟಲ್ ಕಾಲೇಜು ಸಮೀಪವಿರುವ 66-ಕೆವಿ ಪಿಎಸ್ಪಿಸಿಎಲ್ ಕಚೇರಿಯಲ್ಲಿ ಅವರನ್ನು ನಿಯೋಜಿಸಿದೆ. ಈ ಸಯಾಮಿ ಅವಳಿಗಳು ಇಲೆಕ್ಟ್ರಿಕಲ್ ವಿಷಯದಲ್ಲಿ ಐಟಿಐ ಡಿಪ್ಲೋಮಾ ಹೊಂದಿದ್ದಾರೆ.
ಅಮೃತಸರದ ಪಿಂಗಲ್ವಾರ ಚ್ಯಾರಿಟೇಬಲ್ ಸೊಸೈಟಿಯಲ್ಲಿ ಬೆಳೆದ ಈ ಸಯಾಮಿ ಅವಳಿಗಳಿಗೆ ಎರಡು ಹೃದಯ ಎರಡು ಜತೆ ಕೈಗಳು, ಎರಡು ಕಿಡ್ನಿ ಹಾಗೂ ಎರಡು ಬೆನ್ನು ಹುರಿ ಹಾಗೂ ಮೆದುಳು ಇವೆ. ಆದರೆ ಅವರು ಒಂದೇ ಲಿವರ್, ಪಿತ್ತಕೋಶ, ಸ್ಪ್ಲೀನ್ ಮತ್ತು ಒಂದು ಜತೆ ಕಾಲುಗಳನ್ನು ಹೊಂದಿದ್ದಾರೆ.
ಡಿಸೆಂಬರ್ 20ರಂದು ಅವರು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಅವರನ್ನು ಅವರ ವಾಸಸ್ಥಳದಿಂದ ಕರ್ತವ್ಯ ಸ್ಥಳಕ್ಕೆ ಕರೆದೊಯ್ಯಲು ಏರ್ಪಾಟುಗಳನ್ನು ಮಾಡಿದೆ ಎಂದು ವರದಿಯಾಗಿದೆ.
ಜೂನ್ 14, 2003ರಲ್ಲಿ ದಿಲ್ಲಿಯ ಸುಚೇತಾ ಕೃಪಲಾನಿ ಆಸ್ಪತ್ರೆಯಲ್ಲಿ ಜನಿಸಿದ ಈ ಸಯಾಮಿ ಅವಳಿಗಳನ್ನು ಅವರ ಹೆತ್ತವರು ತ್ಯಜಿಸಿದ್ದರು. ನಂತರ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಪ್ರತ್ಯೇಕಿಸಿದರೆ ಜೀವಕ್ಕೆ ಅಪಾಯವೆಂದು ವೈದ್ಯರು ಶಸ್ರ್ರಕ್ರಿಯೆ ನಡೆಸಿರಲಿಲ್ಲ ನಂತರ ಪಿಂಗಲ್ವಾರ ಚ್ಯಾರಿಟೇಬಲ್ ಸೊಸೈಟಿಯನ್ನು ಸಂಪರ್ಕಿಸಿ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಲಾಗಿತ್ತು. ಖ್ಯಾತ ಲೇಖಕ ಹಾಗೂ ದಾನಿ ಭಗತ್ ಪುರಾಣ್ ಸಿಂಗ್ ಅವರು ಸ್ಥಾಪಿಸಿದ್ದ ಈ ಸೊಸೈಟಿಯ ಪೋಷಕ ಅಧ್ಯಕ್ಷ ಡಾ. ಇಂದರ್ಜಿತ್ ಕೌರ್ ಈ ಅವಳಿಗಳಿಗೆ ಸೊಹ್ನಾ ಮತ್ತು ಮೊಹ್ನಾ ಎಂಬ ಹೆಸರಿಟ್ಟಿದ್ದರು. ಈ ಸಯಾಮಿ ಅವಳಿಗಳಿಗೆ ಸಂಗೀತವೆಂದರೆ ಇಷ್ಟ ಹಾಗೂ ಅವರು ಹಾರ್ಮೋನಿಯಂ ಕೂಡ ನುಡಿಸಬಲ್ಲರು.