ಸಣ್ಣ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ ಎಂದರೆ ಹೇಗೆ: ಬಿಜೆಪಿ ಶಾಸಕ ನಾಗೇಂದ್ರ ಪ್ರಶ್ನೆ
ಬೆಳಗಾವಿ ಅಧಿವೇಶನ

photo: twitter
ಬೆಳಗಾವಿ, ಡಿ. 24: ಮೈಸೂರು ಮಹಾನಗರ ಪಾಲಿಕೆಯ ದೇವರಾಜ ಮಾರುಕಟ್ಟೆ ಹಾಲಿ ಕಟ್ಟಡ ತೆರವುಗೊಳಿಸುವ ಸಂಬಂಧದ ಸಣ್ಣ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ ಎಂದರೆ ಹೇಗೆ? ಎಂದು ಆಡಳಿತ ಪಕ್ಷದ ಸದಸ್ಯ ನಾಗೇಂದ್ರ ಎಲ್. ಪ್ರಶ್ನಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, 2019ರಲ್ಲಿ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದೀಗ ಎರಡು ವರ್ಷ ಕಳೆದಿದ್ದರೂ ಕನಿಷ್ಠ ಪಕ್ಷ ತಡೆಯಾಜ್ಞೆ ತೆರವು ಮಾಡಲು ಇಲಾಖೆ ಏಕೆ ಕ್ರಮ ವಹಿಸಿಲ್ಲ ಎಂದು ಕೇಳಿದರು.
ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ 136 ವರ್ಷಗಳಷ್ಟು ಹಳೆಯದಾಗಿದ್ದು, ಒಟ್ಟು 740 ಮಳಿಗೆಗಳಿವೆ. ಆದರೆ, 2018ರಲ್ಲಿ 8 ಮಳಿಗೆಗಳು ಕುಸಿದುಬಿದ್ದಿದ್ದು, ಬೆಂಕಿ ಅವಘಡ ಸಂಭವಿಸಿದೆ. ಹೀಗಾಗಿ ಕೂಡಲೇ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಮಾರುಕಟ್ಟೆ ಅಭಿವೃದ್ಧಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಬಳಿಕ ಉತ್ತರ ನೀಡಿದ ಸಚಿವ ಬಿ.ಎ.ಬಸವರಾಜ್, 2022ರಜನವರಿ 5ಕ್ಕೆ ತಕರಾರು ಅರ್ಜಿ ವಿಚಾರಣೆಗೆ ಬರಲಿದ್ದು, ತಡೆಯಾಜ್ಞೆ ತೆರವಿಗೆ ಸರಕಾರ ಕ್ರಮ ವಹಿಸಲಿದೆ. ಆ ಬಳಿಕ ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.





