ಜ. 3ರಂದು ನವ ಮತದಾರರ ನೋಂದಣಿ ಅಭಿಯಾನ: ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್
ಮಂಗಳೂರು, ಡಿ.24: ಈ ಹಂತದಲ್ಲಿ ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ನವ ಅರ್ಹ ಮತದಾರರನ್ನು 2022ರ ಜನವರಿ 3ರ ಸೋಮವಾರ ನಡೆಯಲಿರುವ ನವ ಮತದಾರರ ನೋಂದಣಿ ಅಭಿಯಾನದಡಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿಯ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ರಥಮ ದರ್ಜೆ ಹಾಗೂ ತತ್ಸಮಾನ ದರ್ಜೆಯ ವಿದ್ಯಾಸಂಸ್ಥೆಗಳ ಮತದಾರರ ಸಾಕ್ಷರತಾ ಸಂಘಗಳ ಮುಖ್ಯಸ್ಥರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಈ ಕುರಿತು ಶೈಕ್ಷಣಿಕ ಸಂಸ್ಥೆಗಳಲ್ಲಿ ಇದೇ ಡಿ.27 ಹಾಗೂ 28ರಂದು ವಿದ್ಯಾರ್ಥಿಗಳಿಗೆ ತರಬೇತಿ ಹಮ್ಮಿಕೊಳ್ಳಬೇಕು ಹಾಗೂ 2022ರ ಜನವರಿ 3 ರಂದು ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತದಾರರ ನೋಂದಣಿ ಅಭಿಯಾನ ಹಮ್ಮಿಕೊಳ್ಳಲು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆಯೂ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮತದಾರರ ವಿಶೇಷ ಪರಿಷ್ಕರಣಾ ಕಾರ್ಯ ಭರದಿಂದ ಸಾಗುತಿತಿದೆ. ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಸುಮಾರು 60,000 ನವ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಇಲ್ಲಿಯವರೆಗೆ ಜಿಲ್ಲೆಯಲ್ಲಿ 10,000 ನವ ಮತದಾರರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಈ ಪ್ರಕ್ರಿಯೆಗೆ ವೇಗ ಒದಗಿಸಲು ಜಿಲ್ಲೆಯಲ್ಲಿರುವ ಪದವಿ ಪೂರ್ವ, ಪದವಿ, ವೈದ್ಯಕೀಯ, ಅರೆ-ವೈದ್ಯಕೀಯ, ತಾಂತ್ರಿಕ-ಶೈಕ್ಷಣಿಕ ಸಂಸ್ಥೆಗಳಲ್ಲಿ 2022ರ ಜನವರಿ 1ಕ್ಕೆ 18 ವರ್ಷ ಪೂರ್ಣಗೊಂಡು, ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದ ಎಲ್ಲಾ ಅರ್ಹ ವಿದ್ಯಾರ್ಥಿಗಳನ್ನು ವೋಟರ್ ಹೆಲ್ಪ್ಲೈನ್ ಹಾಗೂ ಎನ್.ವಿ.ಎಸ್.ಪಿ. ವೆಬ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಬೇಕು ಎಂದು ಹೇಳಿದರು.ಅದಕ್ಕಾಗಿ ವಿದ್ಯಾಸಂಸ್ಥೆಗಳ ಮುಖ್ಯಸ್ಥರಿಗೆ ವಿವಿಧ ತಂತ್ರಾಂಶಗಳ ಮೂಲಕಢ ಮೂಲಕ ಅತಿ ಸರಳವಾಗಿ ನವ ಮತದಾರರು ನೋಂದಣಿ ಮಾಡುವ ವಿಧಾನದ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿದೆ, ಇದು ಅತ್ಯಂತ ಪ್ರಮುಖ ಪ್ರಕ್ರಿಯೆಯಾಗಿದ್ದು, ಪ್ರಜಾಪ್ರಭುತ್ವ ಬಲ ಬಲಪಡಿಸುವಲ್ಲಿ ನಿರ್ಣಾುಕ ಪಾತ್ರ ವಹಿಸುತ್ತದೆ ಎಂದರು.
ಜಿಲ್ಲಾ ಸ್ವೀಪ್ ಸಂಯೋಜಕ ಸುಧಾಕರ ಮಾತನಾಡಿ, ಪ್ರತಿ ಸಂಸ್ಥೆಯಲ್ಲಿ ಮತದಾರರ ಸುರಕ್ಷತಾ ಸಂಘಗಳನ್ನು ಸಕ್ರಿಯಗೊಳಿಸಿ ಪ್ರಜಾಪ್ರಭುತ್ವದ ಮೂಲ ಬೇರುಗಳನ್ನು ವಿದ್ಯಾರ್ಥಿಗಳಲ್ಲಿ ಗಟ್ಟಿಗೊಳಿಸುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.ತಾಂತ್ರಿಕ ಸಹಾಯಕ ರಾಮ ವಿವಿಧ ತಂತ್ರಾಂಶಗಳ ಮೂಲಕ ನವ ಮತದಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವ ವಿಧಾನವನ್ನು ತಿಳಿಸಿಕೊಟ್ಟರು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ಪ್ರಾಂಶುಪಾಲರು ಆನ್ಲೈನ್ ಸಭೆಯಲ್ಲಿ ಭಾಗವಹಿಸಿದ್ದರು.







