ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಜಾಗೊಳಿಸುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಪಂಜಿನ ಮೆರವಣಿಗೆ

ಮೈಸೂರು,ಡಿ.24: ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಜಾಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಸಂಜೆ ಪಂಜಿನ ಮೆರವಣಿಗೆ ನಡೆಸಲಾಯಿತು.
ರಂಗಾಯಣ ಉಳಿಸಿ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನೆಗೆ ವಿವಿಧ ಸಂಘಟನೆಗಳವರು ಬೆಂಬಲ ವ್ಯಕ್ತಪಡಿಸಿದ್ದು, ಶುಕ್ರವಾರ ಬೆಳಿಗ್ಗೆ ರಂಗಾಯಣದ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿ ಸಂಜೆ ಕುಕ್ಕರಹಳ್ಳಿ ಕೆರೆ ಬಳಿಯಿಂದ ರಂಗಾಯಣದ ಪೂರ್ವ ದ್ವಾರದ ವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು.
ಇದೇ ವೇಳೆ ದಸಂಸ ಮುಖಂಡ ಕಲ್ಲಹಳ್ಳಿ ಕುಮಾರ್ ಮಾನಾಡಿ, ರಂಗಾಯಣದ ಘನತೆ ಮತ್ತು ಗೌರವವನ್ನು ಹಾಳು ಮಾಡಿ ಕೋಮುವಾದಿ ಮನಸ್ಥಿತಿಯನ್ನು ವ್ಯಕ್ತಪಡಿಸುತ್ತಿರುವ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ಕೂಡಲೇ ರಾಜ್ಯ ಸರ್ಕಾರ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಹವ್ಯಾಸಿ ರಂಗ ಕಲಾವಿದರಿಗೂ ರಂಗಾಯಣದೊಳಕ್ಕೆ ಅವಕಾಶ ನೀಡದೆ ಅಪಮಾನಿಸಲಾಗುತ್ತಿದೆ. ಇಲ್ಲಿಯೂ ಸಲ್ಲದವನು ಎಲ್ಲಿಯೂ ಸಲ್ಲುವನಯ್ಯ ಎಂಬಂತೆ ಅಡ್ಡಂಡ ಸಿ.ಕಾರ್ಯಪ್ರನ ಸ್ಥಿತಿ ಆಗಿದೆ. ಹಾಗಾಗಿ ರಂಗಾಯಣದ ಘನತೆ ಮತ್ತು ಪಾವಿತ್ರ್ಯತೆ ಮತ್ತೆ ಎಂದಿನಂತೆ ಮರುಕಳಿಸಬೇಕಾದರೆ ಈತ ಇಲ್ಲಿಂದ ತೊಲಗಲೇ ಬೇಕು ಎಂದು ಹೇಳಿದರು.
ರಂಗಾಯಣವನ್ನು ಉಳಿಸಿ ಬೆಳಸಬೇಕಾದ ಈತ ವಿಫಲಗೊಂಡಿದ್ದಾರೆ. ಇವರನ್ನು ರಾಜ್ಯ ಸರ್ಕಾರ ವಜಾಗೊಳಿಸದಿದ್ದರೆ ವಿವಿಧ ಸಂಘಟನೆಗಳೊಳಗೂಡಿ ಮೈಸೂರು ಜಿಲ್ಲೆಯನ್ನು ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ಒಕ್ಕೂಟದ ಕರ್ಣ ಮಾತನಾಡಿ, ಅಡ್ಡಂಡ ಸಿ.ಕಾರ್ಯಪ್ಪ ವಜಾಗೊಳಿಸುವವರೆಗೂ ಹೋರಾಟ ಮುಂದುವರೆಯಲಿದೆ. ಈ ಹೋರಾಟಕ್ಕೆ ದಲಿತ ವಿದ್ಯಾರ್ಥಿ ಒಕ್ಕೂಟ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.
ಪಂಜಿನ ಮೆರವಣಿಗೆಯಲ್ಲಿ ಹಿರಿಯ ಸಮಾಜವಾದಿ ಪ.ಮಲ್ಲೇಶ್, ರಂಗಕರ್ಮಿ ಜನಾರ್ಧನ್ (ಜನ್ನಿ), ಕೃಷ್ಣ ಪ್ರಸಾದ್, ಜಿ.ಪಿ.ಬಸವರಾಜು, ಕೆ.ಆರ್.ಗೋಪಾಲಕೃಷ್ಣ, ಸಂಶೋಧಕರ ಸಂಘದ ರಾಜ್ಯಾಧ್ಯಕ್ಷ ಮರಿದೇವಯ್ಯ ಮೈಮ್ ರಮೇಶ್, ಮೋಹನ್ ಕುಮಾರ್‍ಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.







