ತನ್ನದಲ್ಲದ ತಪ್ಪಿಗಾಗಿ ಸರ್ವಸ್ವ ಕಳೆದುಕೊಂಡ ಗಿರಿಜಾ ಶೆಟ್ಟಿಗಾರ್!
ನ್ಯಾಯ ಒದಗಿಸಲು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದಿಂದ ಪ್ರಯತ್ನ

ಉಡುಪಿ, ಡಿ.24: ತಾನು ಮಾಡಿರದ ತಪ್ಪಿಗಾಗಿ ತನ್ನ ಮನೆ, ಜಮೀನು ಬ್ಯಾಂಕ್ ಠೇವಣಿ ಕಳೆದುಕೊಂಡಿರುವ ಬ್ರಹ್ಮಾವರ ಸಾಲಿಕೇರಿಯ ನಿವಾಸಿ ಗಿರಿಜಾ ಶೆಟ್ಟಿಗಾರ್(70) ಇಂದು ಎರಡು ಹೊತ್ತಿನ ತುತ್ತಿಗಾಗಿ ಮತ್ತು ಕೂಲಿ ಕೆಲಸಕ್ಕಾಗಿ ಮನೆ ಮನೆ ಅಲೆಯುತ್ತಿದ್ದಾರೆ. ಈ ಹಿರಿಯ ಜೀವಕ್ಕೆ ನ್ಯಾಯ ದೊರಕಿಸುವ ಸರ್ವ ಪ್ರಯತ್ನವನ್ನು ಉಡುಪಿಯ ಮಾನವ ಹಕ್ಕುಗ ರಕ್ಷಣಾ ಪ್ರತಿಷ್ಠಾನ ಮಾಡುತ್ತಿದೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಗಿರಿಜಾ ಶೆಟ್ಟಿಗಾರ್ ಸಮ್ಮುಖದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ್ ಶಾನ್‌ಬಾಗ್ ಮಾಹಿತಿ ನೀಡಿದರು. ಗಿರಿಜಾ ವೃದ್ಧಾಪ್ಯದ ಕಾರಣದಿಂದಾಗಿ ಕಣ್ಣು ಕಾಣಿಸದೆ, ಕಿವಿಯೂ ಕೇಳಿಸದೆ ಕಳೆದ ಐದು ತಿಂಗಳಿನಿಂದ ಸಾಲಿಕೇರಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಇವರಿಗೆ ಊಟ, ವಸತಿ ನೀಡುವಂತೆ ನಾಳೆಯೇ ಎಸಿ ಕೋರ್ಟ್‌ನಲ್ಲಿ ದಾವೆ ಹೂಡಲಾಗುವುದು ಎಂದರು.
ಸುಮಾರು 45 ವರ್ಷಗಳ ಹಿಂದೆ ಸಾಲಿಕೇರಿಯಲ್ಲಿ ಕೈ ಮಗ್ಗದಿಂದ ಸೀರೆ ತಯಾರಿಸುವ ಉದ್ಯಮ ನಡೆಸುತ್ತಿದ್ದ ಪರಮೇಶ್ವರ ಶೆಟ್ಟಿಗಾರ್ ತಮ್ಮ ಮೊದಲ ಪತ್ನಿಯ ಮರಣ ನಂತರ, ಗಿರಿಜಾರನ್ನು ವಿವಾಹವಾಗಿದ್ದರು. ಪರಮೇಶ್ವರ ಶೆಟ್ಟಿಗಾರರಿಗೆ ಮೊದಲ ಪತ್ನಿಯಿಂದ 3 ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಗಿರಿಜಕ್ಕಳಿಗೆ ಸ್ವಂತ ಮಕ್ಕಳಿಲ್ಲ. ಎಲ್ಲಾ ಮಕ್ಕಳನ್ನೂ ಗಿರಿಜಾ ತಮ್ಮ ಸ್ವಂತ ಮಕ್ಕಳಂತೆ ಸಾಕಿಸಲಹಿದರು. ಪರಮೇಶ್ವರ ಶೆಟ್ಟಿಗಾರ್ 2003ರ ನ.24ರಂದು ವ್ಯವಸ್ಥಾ ಪತ್ರವೊಂದರ ಮೂಲಕ ವಾರಂಬಳ್ಳಿ ಗ್ರಾಮದ 40 ಸೆಂಟ್ಸ್ ಜಮೀನು ಹಾಗೂ ಅದರಲ್ಲಿರುವ ಮನೆಯನ್ನು ತಮ್ಮ ಎರಡನೆ ಮಗನ ಸ್ವಾಧೀನಕ್ಕೆ ನೀಡಿದರು. ಅದೇ ದಸ್ತಾವೇಜಿನ ಮೂಲಕ ಪರಮೇಶ್ವರ ಶೆಟ್ಟಿಗಾರ್, ಪತ್ನಿ ಗಿರಿಜಾಗೆ ಜೀವಿತಾವಧಿ ಯವರೆಗೆ ವಾಸ್ತವ್ಯದ ಹಕ್ಕನ್ನು ನೀಡಿದರು ಎಂದು ಅವರು ತಿಳಿಸಿದರು.
ಮನೆ ಬ್ಯಾಂಕ್ ವಶಕ್ಕೆ: 2007ರಲ್ಲಿ ಪರಮೇಶ್ವರ ಶೆಟ್ಟಿಗಾರ್ ನಿಧನರಾದ ಬಳಿಕ ಎರಡನೇ ಮಗ ಈ ಮನೆ ಮತ್ತು ಜಮೀನನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ಅಡವಿಟ್ಟು ಸಾಲ ಪಡೆದರು. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಬ್ಯಾಂಕಿನವರು 2008 ಅಕ್ಟೋಬರ್‌ನಲ್ಲಿ ಗಿರಿಜಾರನ್ನು ಹೊರಹಾಕಿ ಮನೆಯನ್ನು ವಶಪಡಿಸಿಕೊಂಡರು.
ಈ ಬಗ್ಗೆ ಗಿರಿಜಾ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ರವಿರಾಜ್ ಮನೆ ಅಡವಿಟ್ಟು ಸಾಲ ಪಡೆಯುವಾಗ ಮನೆಯ ವಾಸ್ತವ್ಯದ ಹಕ್ಕನ್ನು ಹೊಂದಿದ್ದ ಗಿರಿಜಾರ ಅನುಮತಿ ಕೇಳಲೇ ಇಲ್ಲ. ಬ್ಯಾಂಕಿನವರು ವ್ಯವಸ್ಥಾ ಪತ್ರವನ್ನು ಪರಿಶೀಲಿಸಿ ವಾಸ್ತವ್ಯ ಹಕ್ಕು ಹೊಂದಿದ್ದ ಗಿರಿಜಾ ಅವರ ಅನುಮತಿ ಕೇಳಬೇಕಾಗಿತ್ತು. ಅದೂ ನಡೆಯಲಿಲ್ಲ. ಮನೆ ಅಡವಿಟ್ಟು ಸಾಲ ಪಡೆದುಕೊಂಡಿರುವ ವಿಚಾರ ಬ್ಯಾಂಕ್ ನೋಟೀಸ್ ಬಂದಾಗಲೇ ಗಿರಿಜಾ ಅವರಿಗೆ ತಿಳಿದದ್ದು ಎಂದು ಅವರು ಹೇಳಿದರು.
ಪ್ರತಿಷ್ಠಾನದಿಂದ ಆಶ್ರಯ: ನಂತರ ಇವರು, ಪರಮೇಶ್ವರ ಶೆಟ್ಟಿಗಾರರ ಮೊದಲ ಮಗ ಬೆಂಗಳೂರಿನ ತಿಮ್ಮಪ್ಪರ ಮನೆಯಲ್ಲಿದ್ದರು. 2021ರ ಜೂನ್ ತಿಂಗಳಲ್ಲಿ ತಿಮ್ಮಪ್ಪ ನಿಧನರಾದ ಬಳಿಕ ಅವರ ಮಗ, ಅಜ್ಜಿಯನ್ನು ಬೆಂಗಳೂರಿನಿಂದ ಕಾರಿನಲ್ಲಿ ಕರೆದುಕೊಂದು ಬಂದು ಸಾಲಿ ಕೇರಿಯ ನಡುರಸ್ತೆಯಲ್ಲೇ ಬಿಟ್ಟು ಹೋದನು ಎಂದು ಅವರು ದೂರಿದರು.
ಇದರಿಂದ ಅನಾಥೆಯಾದ ಗಿರಿಜಾ ಪ್ರತಿಷ್ಠಾನವನ್ನು ಆಶ್ರಯಿಸಿದರು. ಗಿರಿಜಾ ಅವರಿಗೆ ಸಂಪೂರ್ಣ ಕಾನೂನು ರಕ್ಷಣೆ ನೀಡಲು ಪ್ರತಿಷ್ಠಾನ ಬದ್ಧವಾಗಿದೆ. ಗಿರಿಜಾ ಅವರಿಗೆ ತಾನು ಸಲಹಿ ಸಾಕಿದ ಮಕ್ಕಳು ಎಲ್ಲಿದ್ದಾರೆಂದು ಗೊತ್ತಿಲ್ಲ. ಹಿರಿಯ ನಾಗರಿಕರ ಕಾನೂನಿನಡಿಯಲ್ಲಿ ಇವರೆಲ್ಲರನ್ನು ಎದುರುದಾರರನ್ನಾಗಿಸಿ ದಾವೆ ಹೂಡಲು ಪ್ರತಿಷ್ಠಾನ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ಮಾನವ ಹಕ್ಕುಗಳ ನ್ಯಾಯಾಲಯಕ್ಕಾಗಿ ಅರ್ಜಿ
ಈಗಾಗಲೇ ಗೆಜೆಟ್ ನೋಟೀಫಿಕೇಶನ್ ಆಗಿರುವ ಮಾನವ ಹಕ್ಕುಗಳ ನ್ಯಾಯಾಲಯವನ್ನು ಉಡುಪಿಯಲ್ಲಿ ಸ್ಥಾಪಿಸುವಂತೆ ಸದ್ಯದಲ್ಲೇ ಉಡುಪಿ ಜಿಲ್ಲಾ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಲಾಗುವುದು ಎಂದು ಡಾ.ರವೀಂದ್ರನಾಥ್ ಶಾನ್‌ಬಾಗ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಗಿರಿಜಾ ಶೆಟ್ಟಿಗಾರ್ ಸೇರಿದಂತೆ ಹಲವು ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ನಡೆಯುತ್ತಿದ್ದು, ಇವರಿಗೆ ನ್ಯಾಯ ಒದಗಿಸಿ ಕೊಡಲು ಶೀಘ್ರದಲ್ಲೇ ಈ ನ್ಯಾಯಾಲಯವನ್ನು ಸ್ಥಾಪಿಸಬೇಕಾಗಿದೆ. ಇಲ್ಲದಿದ್ದರೆ ಹೈಕೋರ್ಟ್‌ನಲ್ಲಿ ರಿಟ್‌ಪಿಟಿಶನ್ ಹಾಕಲಾಗುವುದೆಂದು ಅವರು ಹೇಳಿದರು.







