ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಪು ಪುರಸಭಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ
ಉಡುಪಿ, ಡಿ.24:ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2021 ಕ್ಕೆ ಸಂಬಂಧಿಸಿದಂತೆ, ಜಿಲ್ಲೆಯ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಡಿ.27ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ, ರಾಜ್ಯ ಅಬಕಾರಿ ಕಾಯ್ದೆ ಅನ್ವಯ ಡಿ.25ರ ಸಂಜೆ 5 ಗಂಟೆಯಿಂದ ಡಿ.27ರ ಸಂಜೆ 5 ರವರೆಗೆ ಎಲ್ಲಾ ರೀತಿಯ ಮದ್ಯದಂಗಡಿ, ಮದ್ಯ ಮಾರಾಟ ಡಿಪೋ, ಮದ್ಯ ತಯಾರಿಕಾ ಡಿಸ್ಟಿಲರಿ, ಸ್ಟಾರ್ ಹೋಟೆಲ್, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಹೋಟೆಲ್, ಕ್ಲಬ್‌ಗಳಲ್ಲಿ ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ.
ಸಂತೆ, ಜಾತ್ರೆ ನಿಷೇಧ: ಚುನಾವಣೆಯ ಹಿನ್ನೆಲೆಯಲ್ಲಿ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಚುನಾವಣಾ ದಿನದಂದು ನಡೆಯುವ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾ ರಾವ್ ಎಂ ಆದೇಶಿಸಿದ್ದಾರೆ.
ವೇತನ ಸಹಿತ ರಜೆ: ಡಿ.27ರಂದು ನಡೆಯುವ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ, ಉಪ ಚುನಾವಣೆಯ ಮತದಾನ ದಿನದಂದು ಚುನಾವಣೆ ನಡೆಯುವ ಪ್ರದೇಶಗಳಲ್ಲಿ ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ.
ಚುನಾವಣಾ ಆಯೋಗ ಹೊರಡಿಸಿದ ಆದೇಶದಂತೆ ಅರ್ಹ ಮತದಾರ ನೌಕರರಿಗೆ ಸೀಮಿತವಾದಂತೆ ಡಿ.27ರಂದು ವೇತನ ಸಹಿತ ರಜೆಯನ್ನು ಘೋಷಿ ಸಲಾಗಿದೆ.







