ಜ.23ಕ್ಕೆ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೊಲಿಯೋ ಲಸಿಕೆ ಹಾಕಿಸಿ: ಉಡುಪಿ ಡಿಸಿ ಕೂರ್ಮಾರಾವ್
![ಜ.23ಕ್ಕೆ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೊಲಿಯೋ ಲಸಿಕೆ ಹಾಕಿಸಿ: ಉಡುಪಿ ಡಿಸಿ ಕೂರ್ಮಾರಾವ್ ಜ.23ಕ್ಕೆ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೊಲಿಯೋ ಲಸಿಕೆ ಹಾಕಿಸಿ: ಉಡುಪಿ ಡಿಸಿ ಕೂರ್ಮಾರಾವ್](https://www.varthabharati.in/sites/default/files/images/articles/2021/12/24/318858-1640359826.jpg)
ಉಡುಪಿ: ಜಿಲ್ಲೆಯ 0-5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಮುಂದಿನ ಜ.23ಕ್ಕೆ ಪೊಲಿಯೋ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ಬಾರಿ ಪಲ್ಸ್ ಪೊಲಿಯೋ ಲಸಿಕೆಯನ್ನು ಜನವರಿ 23 ರಂದು ನೀಡಲಾಗುತ್ತಿದ್ದು, ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆಯನ್ನು ತಪ್ಪದೇ ಹಾಕಿಸಬೇಕು. ಪೊಲಿಯೋ ಲಸಿಕೆ ಕಾರ್ಯಕ್ರಮದ ಬಗ್ಗೆ ತಮ್ಮ ನೆರೆಹೊರೆಯವರಿಗೂ ತಿಳಿಸಿ ಅವರ ಮಕ್ಕಳೂ ಸಹ ಲಸಿಕೆ ಹಾಕಿಸಿಕೊಳ್ಳುವಂತೆ ಅರಿವು ಮೂಡಿಸಬೇಕೆಂದರು.
ಜಿಲ್ಲೆಯಲ್ಲಿ 686 ಲಸಿಕಾ ಕೇಂದ್ರಗಳಲ್ಲಿ ಪೊಲಿಯೋ ಲಸಿಕೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಬಸ್ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ಯಾತ್ರಾ ಸ್ಥಳಗಳು ಹಾಗೂ ಜಿಲ್ಲೆಯ ಬೀಚ್ಗಳಲ್ಲಿ ಸಹ ಲಸಿಕಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ ಎಂದರು.
ಲಸಿಕಾ ಕಾರ್ಯಕ್ರಮದ ಬಗ್ಗೆ ತಾಲೂಕು ಮಟ್ಟದ ಸಮಿತಿಗಳು ಸಭೆ ಸೇರಿ ಆಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜನವರಿ 23ರಂದು ಪೊಲಿಯೋ ಲಸಿಕೆ ನೀಡುವ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈ ಬಾರಿ 74,049 ಮಕ್ಕಳಿಗೆ ಪಲ್ಸ್ ಪೊಲಿಯೋ ನೀಡಲು ಗುರುತಿಸಲಾಗಿದ್ದು, ಲಸಿಕೆ ನೀಡಲು ಆರೋಗ್ಯ ಸಿಬ್ಬಂದಿ, ಮೇಲ್ವಿಚಾರಕರು ಸೇರಿದಂತೆ ಎಲ್ಲಾ ಅಗತ್ಯ ಸಿಬ್ಬಂದಿಗಳ ನೇಮಕ ಮಾಡಲಾಗಿದ್ದು, ಎಲ್ಲಾ ಇಲಾಖಾ ಅಧಿಕಾರಿಗಳು ಪಲ್ಸ್ ಪೊಲಿಯೋ ಕಾರ್ಯಕ್ರಮ ಯಶಸ್ಸಿಗೆ ಕೈ ಜೋಡಿಸಬೇಕೆಂದರು.
ಸಭೆಯಲ್ಲಿ ಜಿಪಂ ಸಿಇಓ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಡಿಹೆಚ್ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ ಹಾಗೂ ಅರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.