ಕ್ರಷರ್ ಮಾಲಕರಿಂದ ಹಲ್ಲೆ ಆರೋಪ: ರೈತ ಕುಟುಂಬದಿಂದ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನ

ಕನಕಪುರ, ಡಿ.24: ಪೋಲಿಸ್ ದೌರ್ಜನ್ಯ ಹಾಗೂ ಕ್ರಷರ್ ಮಾಲಕರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಿ ರೈತ ಕುಟುಂಬವೊಂದು ನಗರದ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿ ಎದುರು ವಿಷ ಕುಡಿಯಲು ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ಶಂಭೇಗೌಡನದೊಡ್ಡಿ ರೈತರು ಕೃಷಿ ಚಟುವಟಿಕೆಗೆ ಓಡಾಡಲು ಮಾಡಿಕೊಂಡಿದ್ದ ರಸ್ತೆಯನ್ನು ಕ್ರಷರ್ ಮಾಲಕರು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಒಂದು ವರ್ಷದಿಂದ ಆನಮಾನಹಳ್ಳಿ ಸರ್ವೇ ನಂ.53 ರಿಂದ 52ರಲ್ಲಿ ಓಡಾಡುವ ರಸ್ತೆಯಲ್ಲಿ ಜಲ್ಲಿ ಕ್ರಷರ್ ನಡೆಯುತ್ತಿರುವುದರಿಂದ ದಟ್ಟ ಧೂಳಿನಿಂದ ರೇಷ್ಮೆ ಬೆಳೆ, ಸೀಮೆ ಹುಲ್ಲು ನಾಶವಾಗುತ್ತಿರುವುದಲ್ಲದೇ ಈಗಾಗಲೇ ಹಸು-ಕರುಗಳು ಸಾವನ್ನಪ್ಪಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ರೈತರ ಜಮೀನಿನ ಸಮೀಪದಲ್ಲಿಯೇ ಗಣಿಗಾರಿಕೆ ಪ್ರಾರಂಭಗೊಂಡು ಇದೇ ದಾರಿಯಲ್ಲಿ ಜಲ್ಲಿ ತುಂಬಿದ ವಾಹನಗಳು ಓಡಾಡುತ್ತಿವೆ. ರೈತರ ಬೆಳೆ ಹಾಗೂ ದನಕರುಗಳು ಓಡಾಡಲು ತೊಂದರೆಯಾಗುತ್ತದೆ ಎಂದು ಕೆಲವು ರೈತರು ಪ್ರಶ್ನಿಸಿದ್ದರಿಂದ, ಕ್ರಷರ್ ಮಾಲಕರು ರೈತ ಕುಟುಂಬದ ಮೇಲೆ ಹಲ್ಲೆ ಹಾಗೂ ಮಾನಸಿಕ ಕಿರುಕುಳ ನೀಡಲು ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿ.ಕೆ.ಬ್ರದರ್ಸ್ ಒಡೆತನದ ಸೌಮ್ಯ ಸ್ಟೋನ್ ಹೆಸರಿನ ಯದುನಂದನ್‌ಗೌಡ ಹಾಗೂ ಚಾಮುಂಡೇಶ್ವರಿ ಸ್ಟೋನ್ ಮಾಲಕ ಹಲಗೂರು ಸುಂದರ್ ಎಂಬವರು ಈ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಗಣಿಗಾರಿಕೆ ಮಾಲಕರ ದೌರ್ಜನ್ಯವನ್ನು ವಿರೋಧಿಸಿ ಠಾಣೆಗೆ ದೂರು ನೀಡಲು ಮುಂದಾದಾಗ ಸಬ್‌ಇನ್‌ಸ್ಪೆಕ್ಟರ್ ರವಿಕುಮಾರ್ ಅವರು, ಗಣಿ ಮಾಲಕರೊಂದಿಗೆ ಶಾಮೀಲಾಗಿ ದೂರುದಾರರ ಮೇಲೆಯೇ ದೌರ್ಜನ್ಯ ಮಾಡಿ ಅವರನ್ನು ಅರೆನಗ್ನಗೊಳಿಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಪೋಲೀಸರಿಂದಲು ನ್ಯಾಯ ಸಿಗದೆ ದೌರ್ಜನ್ಯಕ್ಕೆ ಒಳಗಾಗಿ ಆತಂಕಗೊಂಡ ಕುಟುಂಬ ಅಸಹಾಯಕತೆಯಿಂದ ಆತ್ಮಹತ್ಯೆಗೆ ನಿರ್ಧರಿಸಿ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಗೆ ತೆರಳಿ ವಿಷ ಕುಡಿಯಲು ಮುಂದಾಗಿದ್ದು, ಈ ಸುದ್ದಿ ತಿಳಿದ ಸಾರ್ವಜನಿಕರು, ಪರ್ತ್ರಕರ್ತರು ತಕ್ಷಣ ಸ್ಥಳಕ್ಕೆ ಧಾವಿಸಿ ರೈತ ಕುಟುಂಬವನ್ನು ಸಮಾಧಾನಪಡಿಸಿ ಅವರ ನಿರ್ಧಾರ ಕೈಬಿಡುವಂತೆ ಮನವಿ ಮಾಡಿದರು. ಹೀಗಾಗಿ ಪೋಲಿಸರ ಎದುರೇ ನಡೆಯಬೇಕಾಗಿದ್ದ ಆತ್ಮಹತ್ಯೆಯ ದುರಂತ ತಪ್ಪಿದೆ.
ಕಳೆದ ತಿಂಗಳು ಇದೇ ರಿತಿ ದೌರ್ಜನ್ಯಕ್ಕೊಳಗಾದ ವಿರೂಪಸಂದ್ರ ಗ್ರಾಮದ ರೈತ ಮತ್ತಿಕುಂಟೆ ವಿಶು ಎಂಬಾತ ರಾಜ್ಯಪಾಲರಿಗೆ ಪತ್ರಬರೆದು ದಯಾಮರಣ ಕೋರಿದ್ದರು. ಬೆನ್ನಲ್ಲೇ ಇಂತಹ ಪ್ರಕರಣ ಮರುಕಳಿಸಿದೆ. ಸಾತನೂರು ಠಾಣೆಯ ಎಸ್ಸೈ ರವಿಕುಮಾರ್, ಎಎಸ್ಸೈ ಬಸವರಾಜು, ಪೇದೆ ಸುಭಾಶ್ ಎಂಬವವರ ದೌರ್ಜನ್ಯದಿಂದ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸರಕಾರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಡಳಿತ ತುರ್ತಾಗಿ ಇತ್ತ ಗಮನಹರಿಸಿ ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ಪೋಲಿಸರಿಂದ ಆಗುತ್ತಿರುವ ದೌರ್ಜನ್ಯದ ವಿರುದ್ಧ ಇಲ್ಲಿನ ಎಸ್ಸೈ ಮತ್ತು ಕೆಲ ಸಿಬ್ಬಂದಿಯನ್ನು ಅಮಾನತುಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶಂಭೇಗೌಡನದೊಡ್ಡಿ ರಸ್ತೆ ವಿವಾದದ ಸ್ಥಳ ಪರಿಶೀಲನೆ ಮಾಡಲಾಗಿದೆ. ಸರ್ವೇ ಕಾರ್ಯವನ್ನು ನಡೆಸಿ ಒತ್ತುವರಿಯಾಗಿರುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಾಗುವುದು. ಅಲ್ಲಿಯವರೆಗೂ ಯಾರೂ ಆ ರಸ್ತೆಯಲ್ಲಿ ಪ್ರವೇಶಿಸದಂತೆ ಪೋಲಿಸರಿಗೆ ಸೂಚನೆ ನೀಡಲಾಗಿದೆ.
ವಿಶ್ವನಾಥ್ – ಕನಕಪುರ ತಹಶೀಲ್ದಾರ್







