ಉತ್ತರ ಪ್ರದೇಶದ ಉದ್ಯಮಿ ನಿವಾಸದ ಮೇಲೆ ಐಟಿ ದಾಳಿ: 150 ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆ

ಹೊಸದಿಲ್ಲಿ, ಡಿ. 24: ಸುಗಂಧ ದ್ರವ್ಯ ಉದ್ಯಮದ ಭಾಗವಾಗಿರುವ ಕಾನ್ಪುರದ ಉದ್ಯಮಿ ಪಿಯೂಷ್ ಜೈನ್ ಗೆ ನಂಟು ಹೊಂದಿರುವ ಕಟ್ಟಡಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, 150 ಕೋಟಿ ರೂಪಾಯಿಗೂ ಅಧಿಕ ನಗದನ್ನು ವಶಪಡಿಸಿಕೊಂಡಿದೆ ಎಂದು ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್ ನ ಕೇಂದ್ರ ಮಂಡಳಿ (ಸಿವಿಐಸಿ) ಅಧ್ಯಕ್ಷ ವಿವೇಕ್ ಜೋಹ್ರಿ ತಿಳಿಸಿದ್ದಾರೆ. ಸಿಬಿಐಸಿಯ ಇತಿಹಾಸದಲ್ಲಿ ಅತ್ಯಧಿಕ ನಗದು ವಶಪಡಿಸಿಕೊಂಡ ಪ್ರಕರಣ ಇದಾಗಿದೆ. ಇದುವರೆಗೆ ಯಾರನ್ನು ಕೂಡ ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ.
ಜೈನ್ ಅವರ ನಿವಾಸದ ಆವರಣದಲ್ಲಿರುವ ಎರಡು ದೊಡ್ಡ ಬೀರುಗಳಲ್ಲಿ ತುಂಬಿಸಿರುವ ನಗದಿನ ರಾಶಿಯನ್ನು ದಾಳಿ ನಡೆದ ಸಂದರ್ಭ ತೆಗೆಯಲಾದ ಫೋಟೊಗಳು ದಾಖಲಿಸಿವೆ. ಹಣದ ಕಟ್ಟುಗಳನ್ನು ಪೇಪರ್ ಗಳಲ್ಲಿ ಸುತ್ತಲಾಗಿದೆ ಹಾಗೂ ಭದ್ರತೆಗಾಗಿ ಯೆಲ್ಲೂ ಟೇಪ್ ಅಂಟಿಸಲಾಗಿದೆ. ಪ್ರತಿ ಫೋಟೊದಲ್ಲಿ ಇಂತಹ 30ಕ್ಕೂ ಅಧಿಕ ನೋಟಿನ ಕಟ್ಟುಗಳು ಕಂಡು ಬಂದಿವೆ. ಇನ್ನೊಂದು ಫೋಟೊ ಗ್ರಾಫ್ ನಲ್ಲಿ ಸಿಬಿಐಸಿ, ಐಟಿ ಇಲಾಖೆ, ಸರಕು ಹಾಗೂ ಸೇವೆ (ಜಿಎಸ್‌ಟಿ)ಗಳ ಬೇಹುಗಾರಿಕೆ ಘಟಕದ ಅಧಿಕಾರಿಗಳು ಕೊಠಡಿಯ ಮಧ್ಯದಲ್ಲಿ ಹೂವಿನ ನೆಲ ಹಾಸಿನ ಮೇಲೆ ಕುಳಿತಿರುವುದು ಹಾಗೂ ಅವರ ಸುತ್ತಮುತ್ತ ಇನ್ನಷ್ಟು ಹಣದ ರಾಶಿ ಹಾಗೂ ಮೂರು ನೋಟಗಳನ್ನು ಲೆಕ್ಕಾಚಾರ ಮಾಡುವ ಮೆಷಿನ್ ಇರುವುದು ಕಂಡು ಬಂದಿದೆ.
ಉತ್ತರಪ್ರದೇಶದ ಕಾನ್ಪುರದಲ್ಲಿ ಶಿಖಾರ್ ಬ್ರಾಂಡ್‌ನ ಪಾನ್ ಮಸಾಲೆ ಹಾಗೂ ಸುಗಂದ ಅಡಿಕೆ ಉತ್ಪನ್ನವನ್ನು ಉತ್ಪಾದಿಸುವ ಮೆಸರ್ಸ್ ತ್ರಿಮೂರ್ತಿ ಫ್ರಾಗ್ರೆನ್ಸ್ ಮಾಲಕತ್ವದ ಉತ್ತರಪ್ರದೇಶ, ಗುಜರಾತ್ ಹಾಗೂ ಮುಂಬೈಯಲ್ಲಿರುವ ಕಾರ್ಖಾನೆಗಳಿಗೆ ದಾಳಿ ಗುರುವಾರ ದಾಳಿ ನಡೆದಿತ್ತು. ಪಿಯೂಷ್ ಜೈನ್ ಅವರ ಕಟ್ಟಡಗಳಿಗೆ ದಾಳಿ ನಡೆಸಿದ ಬಳಿಕ ಕಾನ್ಪುರದಲ್ಲಿರುವ ಮೆಸರ್ಸ್ ಗಣಪತಿ ರೋಡ್ ಕ್ಯಾರಿಯರ್ಸ್‌ನ ಗೋದಾಮು ಹಾಗೂ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಯಿತು. ‘‘ಬೇಹುಗಾರಿಕೆ ಮಾಹಿತಿಯ ಆಧಾರದಲ್ಲಿ ಸುಗಂಧ ದ್ರವ್ಯದ ಸಂಯುಕ್ತವನ್ನು ಪೂರೈಕೆ ಮಾಡುವ ಒಡೊಕೆಮ್ ಕಾರ್ಖಾನೆಯ ಪಾಲುದಾರದ ನಿವಾಸಗಳಿಗೆ ಕೂಡ ದಾಳಿ ನಡೆಯಿತು’’ ಎಂದು ಜಿಎಸ್‌ಟಿ ಹೇಳಿಕೆ ತಿಳಿಸಿದೆ.







