ಕೇರಳ ಎಸ್ಡಿಪಿಐ ನಾಯಕನ ಹತ್ಯೆ: ಇನ್ನೂ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರ ಬಂಧನ

ತಿರುವನಂತಪುರ,ಡಿ.24: ಅಲಪ್ಪುಳದಲ್ಲಿ ಡಿ.18ರಂದು ನಡೆದಿದ್ದ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆರೋಪಿಗಳಾದ ತ್ರಿಶೂರು ಜಿಲ್ಲೆಯ ಚಾಲಕುಡಿ ತಾಲೂಕಿನ ಆರೆಸ್ಸೆಸ್ ನ ಬೌದ್ಧಿಕ ಪ್ರಮುಖ್ ಕೆ.ಟಿ. ಸುರೇಶ್ (49) ಮತ್ತು ಕಾರ್ಯಕರ್ತ ಎಂ.ಉಮೇಶ್ (27) ಎನ್ನುವವರನ್ನು ತ್ರಿಶೂರು ಜಿಲ್ಲೆಯಲ್ಲಿನ ಅಡಗುದಾಣದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇದಕ್ಕೂ ಮುನ್ನ ಅಲಪ್ಪುಳದ ಮನ್ನಂಚೇರಿ ಗ್ರಾಮದಿಂದ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಎಸ್ಡಿಪಿಐ ಮುಖಂಡ ಶಾನ್ ಹತ್ಯೆಗೆ ಪ್ರತಿಕಾರವಾಗಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಘಟಕದ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ರನ್ನು ಹತ್ಯೆ ಮಾಡಲಾಗಿತ್ತು. ರಂಜಿತ್ ಕೊಲೆಗೆ ಸಂಬಂಧಿಸಿದಂತೆ ಐವರು ಎಸ್ಡಿಪಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಎರಡೂ ಪ್ರಕರಣಗಳಲ್ಲಿ ಬಂಧಿತರ ಪೈಕಿ ಯಾರೂ ನೇರವಾಗಿ ಅಪರಾಧದಲ್ಲಿ ಭಾಗಿಯಾಗಿರಲಿಲ್ಲ,ಆದರೆ ಹಂತಕರಿಗೆ ಅಗತ್ಯ ಬೆಂಬಲ ಒದಗಿಸಿದ್ದರು ಎಂದು ಪೊಲೀಸರು ಶುಕ್ರವಾರ ತಿಳಿಸಿದರು.
ಕೊಲೆಗಳನ್ನು ನಡೆಸಿರುವ ಗ್ಯಾಂಗ್‌ಗಳು ಈಗಲೂ ತಲೆಮರೆಸಿಕೊಂಡಿವೆ ಮತ್ತು ರಾಜ್ಯದಿಂದ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಶೋಧ ಕಾರ್ಯಾಚರಣೆಯ ಅಂಗವಾಗಿ ಇತರ ರಾಜ್ಯಗಳಿಗೆ ಪೊಲೀಸ್ ತಂಡಗಳನ್ನು ರವಾನಿಸಲಾಗಿದೆ ಎಂದು ಎಡಿಜಿಪಿ ವಿಜಯ ಸಾಖರೆ ಸುದ್ದಿಗಾರರಿಗೆ ತಿಳಿಸಿದರು.