ದಾನಿಶ್ ಸಿದ್ದೀಕಿಗೆ ಮರಣೋತ್ತರವಾಗಿ ಎಂಪಿಸಿ ‘ವರ್ಷದ ಪತ್ರಕರ್ತ’ ಪ್ರಶಸ್ತಿ

ಮುಂಬೈ,ಡಿ.24: ಅಫ್ಘಾನಿಸ್ತಾನದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ತೆತ್ತ ಫೋಟೊಜರ್ನಲಿಸ್ಟ್ ದಾನಿಶ್ ದಾನಿಶ್ ಸಿದ್ದೀಕಿ ಅವರಿಗೆ ಮುಂಬೈ ಪ್ರೆಸ್ ಕ್ಲಬ್ (ಎಂಪಿಸಿ) 2020ನೇ ಸಾಲಿಗೆ ‘ವರ್ಷದ ಪತ್ರಕರ್ತ’ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನಿಸಲಿದೆ.
ದಿಲ್ಲಿಗೆ ಸ್ಥಳಾಂತರಗೊಳ್ಳುವ ಮುನ್ನ ಮುಂಬೈನಲ್ಲಿ ಸುದೀರ್ಘ ಸಮಯ ಕಾರ್ಯ ನಿರ್ವಹಿಸಿದ್ದ ಸಿದ್ದೀಕಿ ರಾಯ್ಟರ್ಸ್ ನ ಮುಖ್ಯ ಫೋಟೊ ಜರ್ನಲಿಸ್ಟ್ ಆಗಿದ್ದರು.
ರೋಹಿಂಗ್ಯಾಗಳು ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳಿಂದ ಹಿಡಿದು ಕೋವಿಡ್-19 ಮತ್ತು ಅಫ್ಘಾನಿಸ್ತಾನದಲ್ಲಿಯ ನಾಗರಿಕ ಯುದ್ಧದವರೆಗಿನ ತನಿಖಾ ಮತ್ತು ಪ್ರಭಾವಶಾಲಿ ಸುದ್ದಿ ಚಿತ್ರಗಳಿಗಾಗಿ ಸಿದ್ದಿಕಿಯವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಎಂಪಿಸಿ ತಿಳಿಸಿದೆ.
ಡಿ.29ರಂದು ನಡೆಯಲಿರುವ ವರ್ಚುವಲ್ ಕಾರ್ಯಕ್ರಮದಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರು ‘ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆಗಾಗಿ ’ ವಾರ್ಷಿಕ ರೆಡ್‌ಲಿಂಕ್ ಪ್ರಶಸ್ತಿಗಳನ್ನು ಪ್ರದಾನಿಸುವ ಜೊತೆಗೆ ಮುಖ್ಯ ಭಾಷಣವನ್ನು ಮಾಡಲಿದ್ದಾರೆ ಎಂದು ಅದು ತಿಳಿಸಿದೆ.
ಜೀವಮಾನ ಸಾಧನೆಗಾಗಿ ಹಿರಿಯ ಪತ್ರಕರ್ತ ಮತ್ತು ಲೇಖಕ ಪ್ರೇಮಶೇಖರ ಝಾ (83) ಮತ್ತು ಇತರ 12 ವಿಭಾಗಗಳಲ್ಲಿ 24 ಪತ್ರಕರ್ತರಿಗೂ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದು.
ಇದು ಎಂಪಿಸಿಯ 10ನೇ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾಗಿದೆ.







