ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣ: ಸಚಿವ ಕೆ.ಎಸ್.ಈಶ್ವರಪ್ಪ

ಬೆಳಗಾವಿ, ಡಿ.24: ರಾಜ್ಯದ ವಿವಿಧ ಇಲಾಖೆಗಳಿಂದ ಶುರುವಾಗಿ ಅರ್ಧಕ್ಕೆ ನಿಂತಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶುಕ್ರವಾರ ವಿಧಾನ ಪರಿಷತ್ತಿನ ಸದಸ್ಯ ಆಯನೂರು ಮಂಜುನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದಿಂದ ಅರ್ಧಕ್ಕೆ ನಿಂತಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಕ್ಕು ಮತ್ತು ಸಿಮೆಂಟ್ ಸರಬರಾಜಿನಲ್ಲಿ 3,84,73,384 ರೂ. ಅವ್ಯವಹಾರವಾಗಿದೆ ಎಂದು 2015ರ ಡಿ. 9ರಂದು ಎನ್.ವಿ.ಸುಬ್ಬಣ್ಣ ಮತ್ತು ವಿ.ಎಸ್.ಶ್ರೀಕಂಠ ಅವರ ಕೆಐಪಿಎ ಸಂಸ್ಥೆ ವರದಿ ನೀಡಿದೆ. ಈ ಹಣವನ್ನು ವಸೂಲಿ ಮಾಡಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮತ (ಕೆಆರ್‍ಐಡಿಎಲ್) ಸಂಸ್ಥೆಯಲ್ಲಿ 1990ರಿಂದ 2021ರವರೆಗೆ 30046.06 ಕೋಟಿ ಅಂತಿಮ ಬಿಲ್ಲುಗಳ ಹೊಂದಾಣಿಕೆ ನಂತರ ಒಟ್ಟು ಲೆಕ್ಕಿಸಿದ ವಿವಿಧ ಸಾಲಗಾರರ ಮೊತ್ತ 88.11 ಕೋಟಿ ಇದೆ. ವಿವಿಧ ಕಾಮಗಾರಿ ವಹಿಸುವ ಇಲಾಖೆಗಳಿಂದ 16.13 ಕೋಟಿ ವಸೂಲಿ ಮಾಡಲಾಗಿದೆ.
ಅದೇ ರೀತಿ, 65.25 ಕೋಟಿ ರೂ.ಗಳನ್ನು ವಸೂಲಾತಿ ಮಾಡಬಹುದಾದ ಮೊತ್ತ (ರೈಟ್ ಆಫ್) ಎಂದು ಪರಿಗಣಿಸಲಾಗಿದೆ. 2018-19 ಮತ್ತು 2019-20ರಲ್ಲಿ 4.36 ಕೋಟಿ ರೈಟ್ ಆಫ್ ಮಾಡಲಾಗಿದೆ. ಇದನ್ನು ಹೊರತು ಪಡಿಸಿ 0.14 ಕೋಟಿ ರೂ. ಮಾತ್ರ ಬಾಕಿ ಇದೆ.
2002ರಿಂದ 2009ರವರೆಗೆ ಸುಮಾರು 43.97 ಕೋಟಿ ಬಾಕಿ ಇದೆ. 30.60 ಕೋಟಿಯಷ್ಟನ್ನು ಲೆಕ್ಕಪತ್ರದಲ್ಲಿ ಸಾಲಗಾರರ ಮೊತ್ತ ಎಂದು ಗುರತಿಸಲಾಗಿದೆ. ವಿವಿಧ ಇಲಾಖೆಗಳಿಂದ ಬರಬೇಕಾದ ಬಾಕಿ ಅನುದಾನವನ್ನು ಪಡೆಯಲು ನಿರಂತರವಾಗಿ ಪತ್ರ ಬರೆಯಲಾಗಿದೆ ಎಂದೂ ಸಚಿವರು ವಿವರಿಸಿದರು.
ಇದಕ್ಕೂ ಮುನ್ನ ಆಯನೂರು ಮಂಜುನಾಥ್ ಅವರು, ಇಲಾಖೆಗೆ ಹಣವೇ ಬಂದಿಲ್ಲ. ಆದರೂ ಅಧಿಕಾರಿಗಳು ಎಲ್ಲಿಂದ ಹಣ ತಂದು ಖರ್ಚು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಬಳಿಕ ಇದಕ್ಕೆ ಈಶ್ವರಪ್ಪ, ಸಂಸ್ಥೆಯಲ್ಲಿ ಹಣಲಭ್ಯ ಇದೆ. ಅದನ್ನು ಬಳಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಅನೇಕ ಇಲಾಖೆಗಳಲ್ಲಿ ಅರ್ಧಕ್ಕೆ ನಿಂತಿರುವ ಕೆಲಸಗಳ ಮಾಹಿತಿ ಪಡೆಯಲಾಗುತ್ತಿದೆ. ಬಹಳಷ್ಟು ಕಟ್ಟಡಗಳು ಅರ್ಧಕ್ಕೆ ನಿಂತಿವೆ. ಅವನ್ನು ಕೆಆರ್‍ಐಡಿಎಲ್‍ನಲ್ಲಿ ಇರುವ ಹಣವನ್ನು ಖರ್ಚು ಮಾಡಿ, ನಂತರ ಆಯಾ ಇಲಾಖೆಯಿಂದ ಹಣವನ್ನು ಪಡೆದುಕೊಳ್ಳುತ್ತೇವೆ ಎಂದು ನುಡಿದರು.







