ಕೋವಿಡ್ ಎರಡನೇ ಅಲೆ ಸಂದರ್ಭ ಗಂಗಾನದಿ ಶವಗಳನ್ನು ಎಸೆಯಲು ತಾಣವಾಗಿತ್ತು: ಸ್ವಚ್ಛ ಗಂಗಾ ಅಭಿಯಾನದ ಮುಖ್ಯಸ್ಥ

ಹೊಸದಿಲ್ಲಿ,ಡಿ.24: ಎಪ್ರಿಲ್-ಮೇ ನಡುವೆ ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಭೀಕರತೆಯು ಉತ್ತುಂಗದಲ್ಲಿದ್ದಾಗ ಗಂಗಾನದಿಯ ದಂಡೆಗಳುದ್ದಕ್ಕೂ ಶವಗಳನ್ನು ಎಸೆಯಲಾಗಿತ್ತು ಎನ್ನುವುದನ್ನು ರಾಷ್ಟ್ರೀಯ ಸ್ವಚ್ಛ ಗಂಗಾ ಅಭಿಯಾನ (ಎನ್‌ಎಂಸಿಜಿ)ದ ಮಹಾನಿರ್ದೇಶಕ ರಾಜೀವ್ ರಂಜನ್ ಮಿಶ್ರಾ ಅವರು ಒಪ್ಪಿಕೊಂಡಿದ್ದಾರೆ ಎಂದು Indianexpress.com ವರದಿ ಮಾಡಿದೆ.
ಮಿಶ್ರಾ ಮತ್ತು ಎನ್‌ಎಂಸಿಜಿಯೊಂದಿಗೆ ಕರ್ತವ್ಯ ನಿರ್ವಹಿಸಿದ್ದ ಪುಷ್ಕಳ ಉಪಾಧ್ಯಾಯ ಅವರು ಬರೆದಿರುವ ‘ಗಂಗಾ:ರಿಕನೆಕ್ಟಿಂಗ್,ರಿಇಮ್ಯಾಜಿನಿಂಗ್,ರಿಜುವೆನೇಟಿಂಗ್’ ಪುಸ್ತಕದಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದ್ದು,ಸಮಸ್ಯೆಯು ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಹೇಳಲಾಗಿದೆ.
ಎರಡನೇ ಅಲೆಯು ಉತ್ತುಂಗದಲ್ಲಿದ್ದಾಗ ಉ.ಪ್ರದೇಶ ಮತ್ತು ಬಿಹಾರಗಳಲ್ಲಿ ಗಂಗಾನದಿಯುದ್ದಕ್ಕೂ ಇರುವ ಹಲವಾರು ನಗರಗಳಲ್ಲಿ ನದಿಯಲ್ಲಿ ಶವಗಳು ತೇಲುತ್ತಿದ್ದ ಅಥವಾ ದಂಡೆಗಳಲ್ಲಿ ಹೂತಿದ್ದ ಬಗ್ಗೆ ವರದಿಗಳು ಬೆಟ್ಟು ಮಾಡಿದ್ದವು. ಇವು ಆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವುಗಳು ಸಂಭವಿಸುತ್ತಿದ್ದರಿಂದ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದಿದ್ದ ಕೋವಿಡ್ ರೋಗಿಗಳ ಶವಗಳು ಎಂದು ಶಂಕಿಸಲಾಗಿತ್ತು.
ಪ್ರಧಾನ ಮಂತ್ರಿಗಳಿಗೆ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ವಿವೇಕ ದೆಬ್ರಾಯ್ ಅವರು ಗುರುವಾರ ಬಿಡುಗಡೆಗೊಳಿಸಿದ ಪುಸ್ತಕದ ‘ಫ್ಲೋಟಿಂಗ್ ಕಾರ್ಪ್ಸ್‌ಸ್:ಎ ರಿವರ್ ಡಿಫ್ಲೈಡ್’ಅಧ್ಯಾಯದಲ್ಲಿ ‘ಕೋವಿಡ್‌ನಿಂದಾಗಿ ಸಾಯುವವರ ಸಂಖ್ಯೆ ಹೆಚ್ಚುತ್ತಿದ್ದಂತೆ ಉ.ಪ್ರದೇಶ ಮತ್ತು ಬಿಹಾರಗಳಲ್ಲಿ ಜಿಲ್ಲಾಡಳಿತಗಳು ಚಿತಾಗಾರಗಳು ಮತ್ತು ಸ್ಮಶಾನಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ್ದರಿಂದ ಗಂಗೆಯು ಶವಗಳನ್ನು ಎಸೆಯಲು ಸುಲಭ ತಾಣವಾಗಿತ್ತು’ ಎಂದು ಹೇಳಲಾಗಿದೆ.
ಆದರೆ ಸಾವಿರಕ್ಕೂ ಅಧಿಕ ಶವಗಳನ್ನು ಎಸೆಯಲಾಗಿತ್ತು ಎಂಬ ಮಾಧ್ಯಮ ವರದಿಗಳನ್ನು ತಿರಸ್ಕರಿಸಿರುವ ಲೇಖಕರು ಅವುಗಳ ಸಂಖ್ಯೆ 300ಕ್ಕಿಂತ ಹೆಚ್ಚಿರಲಿಲ್ಲ. ಸಮಸ್ಯೆಯು ಕನೌಜ್ ಮತ್ತು ಬಲಿಯಾ ನಡುವೆ ಉದ್ಭವಿಸಿತ್ತು. ಬಿಹಾರದಲ್ಲಿ ಪತ್ತೆಯಾಗಿದ್ದ ಶವಗಳೂ ಉತ್ತರ ಪ್ರದೇಶದಿಂದ ನದಿಯಲ್ಲಿ ತೇಲಿ ಬಂದಿದ್ದವು ಎಂದು ಹೇಳಿದ್ದಾರೆ.
ತಾನು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದಾಗ ಗಂಗಾನದಿಯಲ್ಲಿ ಅರೆಸುಟ್ಟ ಮತ್ತು ಊದಿಕೊಂಡಿದ್ದ ಶವಗಳು ತೇಲುತ್ತಿವೆ ಎಂಬ ಮಾಹಿತಿ ತನಗೆ ಲಭಿಸಿತ್ತು ಎಂದು ಮಿಶ್ರಾ ಬರೆದಿದ್ದಾರೆ.
ಎರಡನೇ ಅಲೆ ಸಂದರ್ಭದಲ್ಲಿ ಕಳಪೆ ಕೋವಿಡ್ ನಿರ್ವಹಣೆಯನ್ನು ಪುಸ್ತಕವು ಬೆಟ್ಟು ಮಾಡಿದೆಯಾದರೂ, ದುಷ್ಕರ್ಮಿಗಳು ಶವಗಳ ಅಂತ್ಯಸಂಸ್ಕಾರ ನಡೆಸುವ ಬದಲು ಗಂಗಾ ನದಿಯಲ್ಲಿ ಅವುಗಳನ್ನು ಎಸೆಯಲು ಪರಿಸ್ಥಿತಿಯನ್ನು ಬಳಸಿಕೊಂಡಿದ್ದರು. ಇದರ ಜೊತೆಗೆ ಮಾಧ್ಯಮಗಳಿಂದ ಪ್ರತಿಕೂಲ ಪ್ರಚಾರವೂ ನಮ್ಮ ಕಳವಳಗಳನ್ನು ಮತ್ತು ಅಸಹಾಯಕತೆಯನ್ನು ಹೆಚ್ಚಿಸಿದ್ದವು ಎಂದು ಹೇಳಿದ್ದಾರೆ.
ನದಿಗಳಲ್ಲಿ ತೇಲುತ್ತಿದ್ದ ಊದಿಕೊಂಡ, ಕೊಳೆತ ಶವಗಳು ಅನಾರೋಗ್ಯ ಹರಡುವ ಭೀತಿಯನ್ನು ಹುಟ್ಟು ಹಾಕಿದ್ದವಲ್ಲದೆ, ಉ.ಪ್ರದೇಶ ಮತ್ತು ಬಿಹಾರ ರಾಜ್ಯ ಸರಕಾರಗಳ ನಡುವೆ ರಾಜಕೀಯ ಕಚ್ಚಾಟಕ್ಕೂ ಕಾರಣವಾಗಿದ್ದವು. ಜೂನ್‌ನಲ್ಲಿ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಉ.ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ಗಂಗಾನದಿ ತೀರದ ಮರಳಿನಲ್ಲಿ ಹೂತಿದ್ದ ಹಲವಾರು ಶವಗಳು ಮೇಲಕ್ಕೆದ್ದು ಬಂದಿದ್ದವು.
ಕೋವಿಡ್ ಎರಡನೇ ಅಲೆಯನ್ನು ನಿರ್ವಹಿಸಲು ತನ್ನ ಸರಕಾರವು ಸಫಲವಾಗಿದೆ ಎಂದು ಉ.ಪ್ರ.ಮುಖ್ಯಮಂತ್ರಿ ಆದಿತ್ಯನಾಥ ಅವರು ಜೂನ್‌ನಲ್ಲಿ ಹೇಳಿಕೊಂಡಿದ್ದರು. ಗಂಗೆಯ ದಡಗಳಲ್ಲಿ ಎಸೆಯಲಾಗಿದ್ದ ಶವಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು, ನದಿ ಸಮೀಪದ ನಿವಾಸಿಗಳು ಶವಗಳನ್ನು ದಂಡೆಯಲ್ಲಿ ಹೂಳುವುದು ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ಉತ್ತರಿಸಿದ್ದರು.







