ಎಂಇಎಸ್ ಪುಂಡಾಟಕ್ಕೆ ಮಹಾರಾಷ್ಟ್ರ ಸರಕಾರದ ಕುಮ್ಮಕ್ಕು: ಜೆಡಿಎಸ್ ಶಾಸಕ ಅನ್ನದಾನಿ

ಬೆಳಗಾವಿ, ಡಿ. 24: ಶಿವಸೇನೆ, ಎಂಇಎಸ್ ಪುಂಡಾಟಿಕೆಗೆ ಮಹಾರಾಷ್ಟ್ರ ಸರಕಾರ ಕುಮ್ಮಕ್ಕು ನೀಡುತ್ತಿದ್ದು, ಈ ವಿಚಾರವಾಗಿ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಸದಸ್ಯ ಅನ್ನದಾನಿ ಒತ್ತಾಯಿಸಿದರು.
ಶುಕ್ರವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅನ್ನದಾನಿ, ರಾಜ್ಯದ ಗಡಿಯಲ್ಲಿ ಮುಖ್ಯಮಂತ್ರಿ ಪ್ರತಿಕೃತಿ ದಹಿಸಲಾಗಿದೆ. ಎಂಇಎಸ್ ಪುಂಡಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದು, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಅಪಮಾನ ಮಾಡಿದ್ದು, ಈ ಘಟನೆ ಖಂಡಿಸಿ ಕನ್ನಡ ಸಂಘಟನೆಗಳು ಬಂದ್ ಕರೆ ನೀಡಿದ್ದು, ಕನ್ನಡಿಗರ ರಕ್ಷಣೆಗೆ ಸರಕಾರ ಆಸ್ಥೆ ವಹಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಶಾಸಕರೊಬ್ಬರು ಕನ್ನಡ ರಕ್ಷಣೆ ಮಾಡಿ ಎಂದು ಕನ್ನಡಿಗರು ಮತ ಕೊಟ್ಟು ಈ ಸದನಕ್ಕೆ ಕಳುಹಿಸಿದರೆ, ಮಹಾರಾಷ್ಟ್ರ ಬಾವುಟ ಹಿಡಿದುಕೊಂಡು ಹೋಗುತ್ತೇನೆಂದು ಹೇಳುತ್ತಾರೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಅವರು ಆಕ್ಷೇಪಿಸಿದರು.
ಕನ್ನಡಿಗರ ರಕ್ಷಣೆಗೆ ಬದ್ಧ: ಬಳಿಕ ಸರಕಾರದ ಪರವಾಗಿ ಉತ್ತರಿಸಿದ ಗೋವಿಂದ ಕಾರಜೋಳ, ಎಂಇಎಸ್ ಪುಂಡಾಟಕ್ಕೆ ಕಡಿವಾಣ ಹಾಕಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈಗಾಗಲೇ ಕೆಲವರನ್ನು ಬಂಧಿಸಿದೆ. ನಾಡು, ನುಡಿ, ನೆಲ, ಜಲ ರಕ್ಷಣೆಗಾಗಿ ಸರಕಾರ ಹಿಂದೇಟು ಹಾಕುವುದಿಲ್ಲ ಎಂದು ಭರವಸೆ ನೀಡಿದರು.







