ಸರಕಾರಿ ಭೂಮಿ ರಕ್ಷಣೆಗೆ ಮಾಜಿ ಸಚಿವ ಕೃಷ್ಣಬೈರೇಗೌಡ ಒತ್ತಾಯ

ಬೆಳಗಾವಿ, ಡಿ. 24: ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿನ ಸರಕಾರದ ವಶದಲ್ಲಿದ್ದ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳರು ಆಕ್ರಮಿಸಿದ್ದನ್ನು ಪ್ರಶ್ನಿಸಿದ ಸ್ಥಳೀಯರನ್ನು ಮಾರಕಾಸ್ತ್ರಗಳಿಂದ ಬೆದರಿಸಿದ್ದು ಸರಕಾರಿ ಆಸ್ತಿ ರಕ್ಷಣೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯ ಕೃಷ್ಣ ಬೈರೇಗೌಡ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ವಿಮಾನ ನಿಲ್ದಾಣ ರಸ್ತೆಯಲ್ಲಿನ ಸರಕಾರಿ ಭೂಮಿಗೆ ಭೂಗಳ್ಳರು ಹಿಂದಿನ ತಹಶೀಲ್ದಾರರ ಸಹಕಾರದಿಂದ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಅಲ್ಲದೆ, ಆ ಜಾಗವನ್ನು ಆಕ್ರಮಿಸಿದ್ದು ಸ್ಥಳೀಯರಿಗೆ ಬೆದರಿಕೆ ಹಲ್ಲೆ ನಡೆಸಿದ್ದಾರೆ. ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರಕಾರದ ಪರವಾಗಿ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ಈ ಸಂಬಂಧ ವರದಿ ತರಿಸಿಕೊಂಡು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಜೊತೆಗ ಸರಕಾರಿ ಭೂಮಿ ರಕ್ಷಣೆಗೆ ಸರಕಾರ ಮುಂದಾಗಲಿದೆ ಎಂದು ಹೇಳಿದರು





