ಎಸ್‌ಸಿಎಸ್‌ಟಿ ಗುತ್ತಿಗೆದಾರರ ಹೆಸರಿನಲ್ಲಿ ಕಾಮಗಾರಿ: ತನಿಖೆಗೆ ಆಗ್ರಹ
ಉಡುಪಿ, ಡಿ.24: ಉಪ್ಪೂರು ಗ್ರಾಪಂ ವ್ಯಾಪ್ತಿಯ ಸರಸ್ವತಿ ನಗರದ ಕಾಂಕ್ರೀಟ್ ಚರಂಡಿ ಕಾಮಗಾರಿಯ ವಿವಾದವನ್ನು ಪರಿಶೀಲಿಸಿದಾಗ ಈ ಕಾಮ ಗಾರಿಯನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಹೆಸರಿನಲ್ಲಿ ಇತರ ವರ್ಗದ ಗುತ್ತಿಗೆದಾರರು ನಡೆಸಿರುವುದು ಕಂಡುಬಂದಿದೆ. ಆದುದರಿಂದ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಂಘ ಉಡುಪಿ ಜಿಲ್ಲಾ ಘಟಕ ಒತ್ತಾಯಿಸಿದೆ.
ಐದು ಲಕ್ಷ ರೂ. ವೆಚ್ಚದ ಈ ಕಾಮಗಾರಿಯನ್ನು ಇತರ ವರ್ಗಕ್ಕೆ ಸೇರಿದ ರಾಜೇಶ್ ಉಪ್ಪೂರು ನಡೆಸಿದ್ದು, ಆ ಕಾಮಗಾರಿಯ ಕರಾರು ಪತ್ರ ಮಾಡಿರುವ ಎಸ್‌ಸಿಎಸ್‌ಟಿ ಗುತ್ತಿಗೆದಾರ ಸತೀಶ್ ಅವರನ್ನು ಹೊಣೆಯಾಗಿರಿಸಿರುವುದು ವಿಪರ್ಯಾಸ. ಈ ಕಾಮಗಾರಿ ನಡೆಸಿದ ಗುತ್ತಿಗೆದಾರ ಮತ್ತು ಅದಕ್ಕೆ ಸಾಥ್ ನೀಡಿದ ಎಸ್‌ಸಿಎಸ್‌ಟಿ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಸ್ ಗುತ್ತಿಗೆದಾರರ ಪರವಾನಿಗೆಯನ್ನು ರದ್ದಪಡಿಸಬೇಕು. ಮೀಸಲಾತಿಯನ್ನು ದುರ್ಬಳಕೆ ಮಾಡಿರುವ ಇಬ್ಬರ ವಿರುದ್ಧವೂ ಪರಿಶಿಷ್ಟ ಜಾತಿಗಳ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು ಎಂದು ಸಂಘ ಪ್ರಕಟಣೆಯಲ್ಲಿ ಆಗ್ರಹಿಸಿದೆ.





