ಬೆಳಗಾವಿ ಅಧಿವೇಶನ: ಪ್ರಶ್ನೆ ಕೇಳದೆ ಸರಕಾರಕ್ಕೆ ಮುಜುಗರ ಸೃಷ್ಟಿಸಿದ ಬಿಜೆಪಿ ಶಾಸಕ ನಡಹಳ್ಳಿ

ಬೆಳಗಾವಿ, ಡಿ. 24: ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ಕೋರಿ ಪ್ರಶ್ನೆ ಕೇಳದೆ ಆಡಳಿತ ಪಕ್ಷದ ಸದಸ್ಯ ಎ.ಎಸ್.ಪಾಟೀಲ್ ನಡಹಳ್ಳಿ ಸರಕಾರಕ್ಕೆ ಮುಜುಗರ ಸೃಷ್ಟಿಸಿದ ಪ್ರಸಂಗ ನಡೆಯಿತು.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎರಡು ಬಾರಿ ನಡಹಳ್ಳಿ ಅವರ ಹೆಸರು ಕರೆದರೂ ನಾನು ಪ್ರಶ್ನೆ ಕೇಳುವುದಿಲ್ಲ ಎಂದು ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯರೇ ಪ್ರಶ್ನೆ ಕೇಳಿ ಪ್ರತಿಭಟಿಸಿದರು.
ಕಲಾಪ ಆರಂಭಗೊಳ್ಳುತ್ತಿದ್ದಂತೆ ಎದ್ದುನಿಂತ ನಡಹಳ್ಳಿ, ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು ಎಂಬ ನಿರೀಕ್ಷೆ ಈ ಭಾಗದ ಜನರಲ್ಲಿ ಇತ್ತು. ಆದರೆ, ಅಧಿವೇಶನದಲ್ಲಿ ಆ ವಿಷಯ ಚರ್ಚೆಗೆ ಅವಕಾಶ ನೀಡುವ ದೃಷ್ಟಿಯಿಂದ ಪ್ರಶ್ನೋತ್ತರ ಅವಧಿಯನ್ನು ಮುಂದೂಡಿ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ಪ್ರಶ್ನೋತ್ತರ ಅವಧಿಯ ಬಳಿಕ ಉ.ಕ.ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಂಡರು.







