ಕಪುರ್ತಲಾ: ಥಳಿಸಿ ಯುವಕನ ಹತ್ಯೆ ಪ್ರಕರಣ; ಕೊಲೆ ಆರೋಪದಲ್ಲಿ ಗುರುದ್ವಾರಾದ ಗ್ರಂಥಿಯ ಬಂಧನ

ಸಾಂದರ್ಭಿಕ ಚಿತ್ರ
ಜಲಂಧರ (ಪಂಜಾಬ್),ಡಿ.24: ಐದು ದಿನಗಳ ಹಿಂದೆ ಕಪುರ್ತಲಾ ಜಿಲ್ಲೆಯ ಗುರುದ್ವಾರಾದಲ್ಲಿ ಉದ್ರಿಕ್ತ ಗುಂಪೊಂದು ಯುವಕನನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಆರೋಪದಲ್ಲಿ ಗುರುದ್ವಾರಾದ ಗ್ರಂಥಿ ಅಮರಜಿತ್ ಸಿಂಗ್ ನನ್ನು ಬಂಧಿಸಿದ್ದಾರೆ.
ಕಪುರ್ತಲಾ ಘಟನೆಯ ಕುರಿತು ನಡೆಸಲಾದ ತನಿಖೆಯಲ್ಲಿ ಗುರುದ್ವಾರಾವನ್ನು ಅಪವಿತ್ರಗೊಳಿಸಿದ್ದಕ್ಕೆ ಯಾವುದೇ ಸಾಕ್ಷಾಧಾರಗಳು ಲಭಿಸಿಲ್ಲ. ಯುವಕನನ್ನು ಥಳಿಸಿ ಕೊಲ್ಲಲಾಗಿದೆ. ತನಿಖೆಯು ಕೊಲೆಯನ್ನು ಬೆಟ್ಟು ಮಾಡಿದೆ ಮತ್ತು ಅದರಂತೆ ಎಫ್ಐಆರ್ ಬದಲಿಸಲಾಗುವುದು ಎಂದು ಶುಕ್ರವಾರ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಬೆನ್ನಿಗೇ ಅಮರಜಿತ್ ಸಿಂಗ್ ರನ್ನು ಬಂಧಿಸಲಾಗಿದೆ.
ವಲಸೆ ಕಾರ್ಮಿಕನೆಂದು ಶಂಕಿಸಲಾಗಿರುವ ಮೃತ ಯುವಕನ ಗುರುತನ್ನೂ ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಯುವಕನ ಶವದಲ್ಲಿ 30 ಗಾಯದ ಗುರುತುಗಳಿದ್ದವು. ಕುತ್ತಿಗೆ,ಪ್ರಷ್ಠ ಮತ್ತು ತಲೆಯಲ್ಲಿ ಆಳವಾದ ಗಾಯಗಳಿದ್ದು,ಖಡ್ಗದಿಂದ ಹಲ್ಲೆ ನಡೆಸಿರುವ ಶಂಕೆಯಿದೆ ಎಂದು ಗುರುವಾರ ಐವರು ವೈದ್ಯರ ತಂಡವು ನಡೆಸಿದ್ದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.
ಡಿ.19ರಂದು ಕಪುರ್ತಲಾದ ಎಸ್ಎಸ್ಪಿ ಹರಕಮಲಪ್ರೀತ್ ಸಿಂಗ್ ಉಪಸ್ಥಿತಿಯಲ್ಲಿಯೇ ಈ ಘಟನೆ ನಡೆದಿತ್ತು. ಗುರುದ್ವಾರವನ್ನು ಅಪವಿತ್ರಗೊಳಿಸಲಾಗಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರ ಸಿಕ್ಕಿಲ್ಲ ಎಂದು ಪೊಲೀಸರು ಆರಂಭದಿಂದಲೇ ಹೇಳುತ್ತ ಬಂದಿದ್ದರು. ಘಟನೆಯ ಬೆನ್ನಿಗೇ ಅಮರಜಿತ್ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರಾದರೂ,ಕೆಲವು ಗಂಟೆಗಳ ಬಳಿಕ ಬಿಡುಗಡೆಗೊಳಿಸಿದ್ದರು.
ಡಿ.19ರಂದು ಬೆಳಗಿನ ಜಾವ ಯುವಕ ಸಿಖ್ ಧಾರ್ಮಿಕ ಧ್ವಜ ನಿಶಾನ್ ಸಾಹಿಬ್ಗೆ ಅಪಚಾರವೆಸಗಲು ಪ್ರಯತ್ನಿಸಿದ್ದ ಎಂದು ಅಮರಜಿತ್ ಸಿಂಗ್ ಆರೋಪಿಸಿದ ಬಳಿಕ ಸುಮಾರು ನೂರು ಜನರ ಗುಂಪು ಪೊಲೀಸರ ವಶದಲ್ಲಿದ್ದ ಆತನ ಮೇಲೆ ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದ.
ಅಮರಜಿತ್ ಸಿಂಗ್ ವಿಭಿನ್ನ ಹೇಳಿಕೆಗಳನ್ನು ನೀಡಿರುವ ಮೂರು ವೀಡಿಯೊಗಳು ವೈರಲ್ ಆಗಿವೆ. ಒಂದರಲ್ಲಿ ಗುರುದ್ವಾರಾದಲ್ಲಿ ಸಮಾವೇಶಗೊಳ್ಳುವಂತೆ ಮತ್ತು ಯುವಕನನ್ನು ಪೊಲೀಸರಿಗೆ ಒಪ್ಪಿಸುವ ಮೊದಲು ಆತನಿಗೆ ಶಿಕ್ಷೆ ನೀಡುವಂತೆ ಅವರು ಜನರನ್ನು ಆಗ್ರಹಿಸಿದ್ದರು. ಅಮರಜಿತ್ ದೂರಿನ ಮೇರೆಗೆ ಪೊಲಿಸರು ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ್ದ ಆರೋಪದಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದರು.







