ರಾಜಸ್ಥಾನ:ಭಾರತೀಯ ವಾಯುಪಡೆಯ ಮಿಗ್ -21 ಯುದ್ದ ವಿಮಾನ ಪತನ,ಪೈಲಟ್ ಮೃತ್ಯು

ಸಾಂದರ್ಭಿಕ ಚಿತ್ರ, ಫೋಟೊ: twitter
ಹೊಸದಿಲ್ಲಿ: ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಶುಕ್ರವಾರ ರಾತ್ರಿ ರಾಜಸ್ಥಾನದ ಜೈಸಲ್ಮೇರ್ ಬಳಿ ಪತನಗೊಂಡಿದ್ದು, ಪೈಲಟ್ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಸಾವನ್ನಪ್ಪಿದ್ದಾರೆ.
ಸುದ್ದಿಯನ್ನು ಖಚಿತಪಡಿಸಿ ವಾಯುಪಡೆಯ ಅಧಿಕೃತ ಹ್ಯಾಂಡಲ್ ಟ್ವೀಟ್ ಮಾಡಿದೆ.
"ಇಂದು ರಾತ್ರಿ 8:30 ರ ಸುಮಾರಿಗೆ ಐಎಎಫ್ನ ಮಿಗ್ -21 ವಿಮಾನವು ಪಶ್ಚಿಮ ವಲಯದಲ್ಲಿ ತರಬೇತಿಯ ಸಮಯದಲ್ಲಿ ಹಾರುವ ವೇಳೆ ಅಪಘಾತಕ್ಕೆ ಒಳಗಾಯಿತು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ತನಿಖೆಗೆ ಆದೇಶಿಸಲಾಗಿದೆ'' ಎಂದು ಭಾರತೀಯ ವಾಯುಪಡೆ ಟ್ವೀಟಿಸಿದೆ.
ಸ್ಯಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಡೆಸರ್ಟ್ ನ್ಯಾಷನಲ್ ಪಾರ್ಕ್ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಜೈಸಲ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತಾನು ಕೂಡ ಅಪಘಾತ ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಪೈಲಟ್ ಸಾವನ್ನು ಖಚಿತಪಡಿಸಿ ವಾಯುಪಡೆ ಟ್ವೀಟ್ ಮಾಡಿದೆ. "ಐಎಎಫ್ ತೀವ್ರ ದುಃಖದಿಂದ ಇಂದು ರಾತ್ರಿ ವಿಮಾನ ಅಪಘಾತದಲ್ಲಿ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಅವರ ದುಃಖದ ನಿಧನವನ್ನು ತಿಳಿಸುತ್ತದೆ ಮತ್ತು ಧೈರ್ಯಶಾಲಿಯ ಕುಟುಂಬದೊಂದಿಗೆ ದೃಢವಾಗಿ ನಿಂತಿದೆ" ಎಂದು ಟ್ವೀಟ್ ಹೇಳಿದೆ.
With deep sorrow, IAF conveys the sad demise of Wing Commander Harshit Sinha in the flying accident this evening and stands firmly with the family of the braveheart.
— Indian Air Force (@IAF_MCC) December 24, 2021