ಕಾಲೇಜು ವಿದ್ಯಾರ್ಥಿಯ ಹತ್ಯೆ ಪ್ರಕರಣ; ಮೂವರು ಬಾಲಕಿಯರು ಸಹಿತ 6 ಮಂದಿಯ ಬಂಧನ

ಸಾಂದರ್ಭಿಕ ಚಿತ್ರ
ಚೆನ್ನೈ, ಡಿ. 24: ಹತ್ತನೇ ತರಗತಿಯ ಇಬ್ಬರು ಬಾಲಕಿಯರನ್ನು ಬ್ಲಾಕ್ ಮೇಲ್ ಮಾಡಿದ ಕಾಲೇಜು ವಿದ್ಯಾರ್ಥಿಯ ಹತ್ಯೆ ಪ್ರಕರಣವನ್ನು ಭೇದಿಸಿರುವ ತಮಿಳುನಾಡು ಪೊಲೀಸರು ಮೂವರು ಬಾಲಕಿಯರು ಹಾಗೂ ಆರು ಮಂದಿಯನ್ನು ಶುಕ್ರವಾರ ಬಂಧಿಸಿದ್ದಾರೆ.
‘‘50 ಸಾವಿರ ರೂಪಾಯಿ ನೀಡದೇ ಇದ್ದರೆ ನಿಮ್ಮ ಖಾಸಗಿ ಕ್ಷಣದ ಫೋಟೊಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಲಾಗುವುದು’’ ಎಂದು ಪ್ರೇಮ್ ಕುಮಾರ್ (19) ಇಬ್ಬರು ಬಾಲಕಿಯರಿಗೆ ಬೆದರಿಕೆ ಒಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಖಿನ್ನರಾದ ಇಬ್ಬರು ಬಾಲಕಿಯಲ್ಲಿ ಒಬ್ಬಳು ತನ್ನ ಸಹೋದರಿಗೆ ಮಾಹಿತಿ ನೀಡಿದ್ದಳು. ಆಕೆ ತನ್ನ ಗೆಳೆಯ ಅಶೋಕ್ ಗೆ ತಿಳಿಸಿದ್ದಳು. ಪ್ರೇಮ್ ಕುಮಾರ್ ನನ್ನು ರೆಡ್ಹಿಲ್ ಪ್ರದೇಶದ ಏಕಾಂತ ಪ್ರದೇಶಕ್ಕೆ ಕರೆ ತರುವಂತೆ ಅಶೋಕ್ ಬಾಲಕಿಯರಿಗೆ ಸೂಚಿಸಿದ್ದ. ಪ್ರೇಮ್ ಕುಮಾರ್ ರೆಡ್ ಹಿಲ್ಸ್ ಗೆ ಆಗಮಿಸುತ್ತಿದ್ದಂತೆ, ಆತನನ್ನು ಅಶೋಕ್ ತಂಡ ಅಪಹರಿಸಿ ಎಚಂಕಾಟುಮೇಡು ಗ್ರಾಮಕ್ಕೆ ಕರೆದುಕೊಂಡು ಹೋಗಿತ್ತು. ಅಲ್ಲಿ ಆತನನ್ನು ಹತ್ಯೆಗೈದು ದಫನ ಮಾಡಿತ್ತು. ಪ್ರೇಮ್ ಕುಮಾರ್ ಹತ್ಯೆಯಾದ ಸ್ಥಳದಲ್ಲಿ ಪತ್ತೆಯಾದ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಪೊಲೀಸರು ಬಾಲಕಿಯರ ನಿವಾಸ ತಲುಪಿದ್ದರು.
ಅನಂತರ ಬಾಲಕಿಯರು ಅಶೋಕ ಹಾಗೂ ಆತನ ಸಹವರ್ತಿಗಳನ್ನು ಬಳಸಿಕೊಂಡು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದರು. ಮೂವರ ಅಪ್ರಾಪ್ತ ಬಾಲಕಿಯರನ್ನು ಅಲ್ಲದೆ, ಅಶೋಕ್ ಕುಮಾರ್ (22), ಎಂ. ಲೆನಿನ್ (21) ಎಂ. ಪ್ರವೀಣ್ ಕುಮಾರ್ (21), ಇ. ಜಗನ್ನಾಥನ್ (22), ಆರ್. ಸ್ಟೀಫನ್ (21) ಹಾಗೂ ಮೋಸೆಸ್ (29)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





