ಯುದ್ಧಕಾಲದಲ್ಲಿ ಮೃತದೇಹಗಳ ತ್ವರಿತ ದಫನ ಕಾನೂನಿಗೆ ರಶ್ಯ ಅನುಮೋದನೆ

ಸಾಂದರ್ಭಿಕ ಚಿತ್ರ:PTI
ಮಾಸ್ಕೊ,ಡಿ.24: ಉಕ್ರೇನ್ ಜೊತೆ ಬಿಕ್ಕಟ್ಟು ಉಲ್ಬಣಿಸಿರುವ ನಡುವೆಯೇ ರಶ್ಯವು ಯುದ್ಧ ಹಾಗೂ ಶಾಂತಿಸಮಯದಲ್ಲಿ ಮೃತದೇಹಗಳನ್ನು ತ್ವರಿತವಾಗಿ ದಫನ ಮಾಡಲು ಅವಕಾಶ ನೀಡುವ ಕಾನೂನಿಗೆ ಅನುಮೋದನೆ ನೀಡಿರುವುದಾಗಿ ವರದಿಗಳು ತಿಳಿಸಿವೆ.
ಉಕ್ರೇನ್ ವಿರುದ್ಧ ರಶ್ಯನ್ನರು ಸೇನಾಜಮಾವಣೆ ನಡೆಸುತ್ತಿದ್ದಾರೆ ಹಾಗೂ ರಶ್ಯದ ನಾಯಕ ಜಗಳಗಂಟತನದ ವಾಗ್ವೈಖರಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಶ್ವೇತಭವನ ಶುಕ್ರವಾರ ರಶ್ಯ ಅಧ್ಯಕ್ಷ ಪುಟಿನ್ ಅವರನ್ನು ಉಲ್ಲೇಖಿಸಿ ಹೇಳಿಕೆ ನೀಡಿದ ಬೆನ್ನಲ್ಲೇ ಕ್ರೆಮ್ಲಿನ್ ಈ ಹೆಜ್ಜೆಯನ್ನಿರಿಸಿದೆ.
ಒಂದು ವೇಳೆ ರಶ್ಯವು ಉಕ್ರೇನ್ ಮೇಲೆ ದಾಳಿ ನಡೆಸಿದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಅಮೆರಿಕವು ರಶ್ಯಕ್ಕೆ ಎಚ್ಚರಿಕೆ ನೀಡಿತ್ತು. ಉಕ್ರೇನ್ ಗಡಿಯಲ್ಲಿ ರಶ್ಯವು ತನ್ನ 10 ಸಾವಿರಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಿರುವುದಾಗಿ ವರದಿಗಳು ಹೇಳಿವೆ.
ಯುದ್ಧ ಹಾಗೂ ಶಾಂತಿ ಕಾಲದಲ್ಲಿ ಮೃತದೇಹಗಳ ತ್ವರಿತ ದಫನಕ್ಕೆ ಅನುಮತಿ ನೀಡು ಕುರಿತಾಗಿ ಜಾರಿಗೊಳಿಸಿರುವ ನಿರ್ದೇಶಗಳನ್ನು ರಶ್ಯನ್ ಆಡಳಿತದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಸೇನಾ ಸಂಘರ್ಷದ ಸಂದರ್ಭದಲ್ಲಿ, ಅಗತ್ಯವಿದ್ದರೆ ಶಾಂತಿಕಾಲದಲ್ಲಿಯೂ ತುರ್ತು ಸನ್ನಿವೇಶಗಳಲ್ಲಿ ಮೃತಪಟ್ಟ ಮನುಷ್ಯರು ಹಾಗೂ ಜಾನುವಾರುಗಳ ತತ್ವರಿತ ದಫನಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ’’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ನೂತನ ಕ್ರಮಗಳು ಫೆಬ್ರವರಿ 1ರಂದು ಜಾರಿಗೆ ಬರುವ ನಿರೀಕ್ಷೆಯಿದೆ. ನಾಗರಿಕ ರಕ್ಷಣಾ ಕ್ರಮಗಳನ್ನು ಕೂಡಾ ಜಾರಿಗೊಳಿಸುವಂತೆ ಆದೇಶವು ಕರೆ ನೀಡಿದೆ.ಯುದ್ಧಕಾಲದಲ್ಲಿ ಸಂಭಾವ್ಯ ಧಫನ ಸ್ಥಳಗಳನ್ನು ಗುರುತಿಸುವಂತೆಯೂ ಅಧಿಕಾರಿಗಳಿಗೆ ಆದೇಶವು ಸೂಚಿಸಿದೆ ಹಾಗೂ ಸಾಮೂಹಿಕ ದಫನಗಳನ್ನು ನಡೆಸುವಂತೆಯೂ ಆದೇಶಪತ್ರದಲ್ಲಿ ತಿಳಿಸಲಾಗಿದೆ.
ಅಮೆರಿಕ ನೇತೃತ್ವದ ನ್ಯಾಟೊ ಸೇನಾ ಮೈತ್ರಿಕೂಟವು ರಶ್ಯದ ಪೂರ್ವದ ಗಡಿಯಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಕೂಡದೆಂದು ಪುಟಿನ್ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಈ ಬಗ್ಗೆ ತಾನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆ ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ.







