ಸನ್ನಿ ಲಿಯೋನ್ ನಟನೆಯ 'ಮಧುಬನ್ ಮೇ ರಾಧಿಕಾ ನಾಚೆ' ನಿಷೇಧಕ್ಕೆ ಅರ್ಚಕರ ಒತ್ತಾಯ

ಸನ್ನಿ ಲಿಯೋನ್ (Photo source: PTI)
ಲಕ್ನೋ, ಡಿ.25: ಸನ್ನಿ ಲಿಯೋನ್ ನಟನೆಯ ಜನಪ್ರಿಯ 'ಮಧುಬನ್ ಮೈನ್ ರಾಧಿಕಾ ನಾಚೆ' ಹಾಡಿನ ನೃತ್ಯವನ್ನು ಒಳಗೊಂಡ ಇತ್ತೀಚಿನ ವಿಡಿಯೊ ಆಲ್ಬಂ ನಿಷೇಧಿಸುವಂತೆ ಉತ್ತರ ಪ್ರದೇಶದ ಮಥುರಾ ಅರ್ಚಕರು ಆಗ್ರಹಿಸಿದ್ದಾರೆ. ಈ ಅಶ್ಲೀಲ ನೃತ್ಯದ ಮೂಲಕ ಬಾಲಿವುಡ್ ತಾರೆ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಾರೆ ಎಂದು ಆಪಾದಿಸಿದ್ದಾರೆ.
ಸರೇಗಮ ಮ್ಯೂಸಿಕ್ ಬುಧವಾರ ಬಿಡುಗಡೆ ಮಾಡಿರುವ ಈ ವೀಡಿಯೊ ಮ್ಯೂಸಿಕ್ ನಲ್ಲಿ ಕನಿಕಾ ಕಪೂರ್ ಮತ್ತು ಅರಿಂದಮ್ ಚಕ್ರಬರ್ತಿ ಹಾಡಿರುವ ಹಾಡಿಗೆ ಸನ್ನಿ ಲಿಯೋನ್ ನೃತ್ಯ ಮಾಡಿದ್ದಾರೆ. ಈ ಹಾಡನ್ನು ಮೂಲವಾಗಿ 1960ರಲ್ಲಿ ಕೊಹಿನೂರ್ ಚಿತ್ರದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಮುಹಮ್ಮದ್ ರಫಿ ಹಾಡಿದ್ದರು.
"ನಟಿ ವಿರುದ್ಧ ಸರಕಾರ ಕ್ರಮ ಕೈಗೊಂಡು ವೀಡಿಯೊ ನಿಷೇಧಿಸದಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗಲಿದ್ದೇವೆ" ಎಂದು ವೃಂದಾವನದ ಸಂತ ನವಲ್ ಗಿರಿ ಮಹಾರಾಜ್ ಹೇಳಿದ್ದಾರೆ. ಇದರ ದೃಶ್ಯಗಳನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಯಾಚಿಸದಿದ್ದರೆ ಅವರನ್ನು ಭಾರತದಲ್ಲಿ ಉಳಿಯಲು ಅವಕಾಶ ನೀಡಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಖಿಲ ಭಾರತೀಯ ತೀರ್ಥ ಪುರೋಹಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಪಾಠಕ್ ಅವರು ಈ ಸಂಬಂಧ ಹೇಳಿಕೆ ನೀಡಿ, "ಸನ್ನಿ ಲಿಯೋನ್ ಅವಮಾನಕರ ರೀತಿಯಲ್ಲಿ ಬಿಂಬಿಸುವ ಮೂಲಕ ಬೃಜ್ಭೂಮಿಯ ಘನತೆಯನ್ನು ಅವಮಾನಿಸಿದ್ದಾರೆ" ಎಂದಿದ್ದಾಗಿ ಪಿಟಿಐ ವರದಿ ಮಾಡಿದೆ. ಈ ಹಾಡಿನ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಲವು ಮಂದಿ ಟೀಕಿಸಿದ್ದಾರೆ.