ಬಂಡವಾಳ ವೆಚ್ಚ ಹೆಚ್ಚಿಸುವಂತೆ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ,ಡಿ.25: ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವ ಪ್ರಯತ್ನವಾಗಿ ಕೇಂದ್ರ ವಿತ್ತ ಸಚಿವಾಲಯವು 2021-22ನೇ ಸಾಲಿನ ಉಳಿದ ಅವಧಿಗೆ ತಮ್ಮ ಬಂಡವಾಳ ವೆಚ್ಚದ ವೇಗವನ್ನು ಹೆಚ್ಚಿಸುವಂತೆ ಸೂಚಿಸಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದೆ ಎಂದು ಸಚಿವಾಲಯದಲ್ಲಿನ ಮೂಲಗಳು ತಿಳಿಸಿವೆ.
ಬಂಡವಾಳ ವೆಚ್ಚ ಕುರಿತು ಕೇಂದ್ರ ಸರಕಾರದ ಇಲಾಖೆಗಳು ಮಾತ್ರವಲ್ಲ,ರಾಜ್ಯಗಳ ಇಲಾಖೆಗಳೊಂದಿಗೂ ವಿತ್ತ ಸಚಿವಾಲಯವು ನಡೆಸುತ್ತಿರುವ ಪ್ರಕ್ರಿಯೆ ಮತ್ತು ಸಮಗ್ರ ಪುನರ್ಪರಿಶೀಲನೆಯ ಭಾಗವಾಗಿ ಈ ಪತ್ರವನ್ನು ಬರೆಯಲಾಗಿದೆ.
ಖಾಸಗಿ ಕ್ಷೇತ್ರದಿಂದ ವೆಚ್ಚವು ನಿಧಾನಗತಿಯಲ್ಲಿ ಮುಂದುವರಿದಿರುವ ಸಮಯದಲ್ಲಿಯೇ ರಾಜ್ಯಗಳು ಬಂಡವಾಳ ವೆಚ್ಚವನ್ನು ಹೆಚ್ಚಿಸುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಕೇಂದ್ರದ ಬಂಡವಾಳ ವೆಚ್ಚವು ಆರ್ಥಿಕತೆಯಲ್ಲಿ ಒಟ್ಟಾರೆ ಹೂಡಿಕೆಯಲ್ಲಿ ಅಲ್ಪಭಾಗವಾಗಿರುವುದರಿಂದ ಆರ್ಥಿಕತೆಯ ಸುಸ್ಥಿರ ಚೇತರಿಕೆಗಾಗಿ ಖಾಸಗಿ ಬಂಡವಾಳ ವೆಚ್ಚವು ನಿರ್ಣಾಯಕವಾಗಿದೆ. 2020-21ರಲ್ಲಿ ಕೇಂದ್ರದ ಬಂಡವಾಳ ವೆಚ್ಚವು ಒಟ್ಟು ಸ್ಥಿರ ಬಂಡವಾಳ ಸೃಷ್ಟಿಯ ಕೇವಲ ಶೇ.8ರಷ್ಟಿತ್ತು. ಒಟ್ಟು ಸ್ಥಿರ ಬಂಡವಾಳ ಸೃಷ್ಟಿಯನ್ನು ಆರ್ಥಿಕತೆಯಲ್ಲಿ ಹೂಡಿಕೆಗೆ ಬದಲಿಯಾಗಿ ಪರಿಗಣಿಸಲಾಗುತ್ತಿದೆ.
ಆದ್ದರಿಂದ 2020-21ರಲ್ಲಿ ಕೇಂದ್ರದ ಬಂಡವಾಳ ವೆಚ್ಚದಲ್ಲಿ ಶೇ.26ರಷ್ಟು ಏರಿಕೆಯಾಗಿದ್ದರೂ ಆ ವರ್ಷದ ಒಟ್ಟು ಸ್ಥಿರ ಬಂಡವಾಳ ಸೃಷ್ಟಿಯು ಶೇ.8.6ರಷ್ಟು ಕುಗ್ಗಿತ್ತು.
2022-23ರಲ್ಲಿ ರಾಜ್ಯಗಳಿಗೆ ಬಂಡವಾಳ ವೆಚ್ಚ ಗುರಿಗಳು ಮತ್ತು ವೆಚ್ಚವನ್ನು ಮಾಡುವಲ್ಲಿ ಅವು ಎದುರಿಸುತ್ತಿರುವ ಅಡಚಣೆಗಳ ಬಗ್ಗೆ ಚರ್ಚಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿ.30ರಂದು ದಿಲ್ಲಿಯಲ್ಲಿ ಎಲ್ಲ ರಾಜ್ಯಗಳ ಹಣಕಾಸು ಸಚಿವರನ್ನು ಭೇಟಿಯಾಗಲಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿದವು.