ಒಮೈಕ್ರಾನ್ ಪ್ರಕರಣಗಳ ಸಂಖ್ಯೆ 415ಕ್ಕೆ ಏರಿಕೆ: 115 ಜನರು ಗುಣಮುಖ

ಸಾಂದರ್ಭಿಕ ಚಿತ್ರ:PTI
ಹೊಸದಿಲ್ಲಿ,ಡಿ.25: ದೇಶದಲ್ಲಿ ಒಟ್ಟು 415 ಒಮೈಕ್ರಾನ್ ಪ್ರಕರಣಗಳು ವರದಿಯಾಗಿದ್ದು,ಕನಿಷ್ಠ 115 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ಬೆಳಿಗ್ಗೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಗರಿಷ್ಠ (108) ಒಮೈಕ್ರಾನ್ ಸೋಂಕು ಪ್ರಕರಣಗಳು ದಾಖಲಾಗಿದ್ದು, ನಂತರದ ಸ್ಥಾನಗಳಲ್ಲಿ ದಿಲ್ಲಿ (79),ಗುಜರಾತ್ (43),ತೆಲಂಗಾಣ (38),ಕೇರಳ (37), ತಮಿಳುನಾಡು (34) ಮತ್ತು ಕರ್ನಾಟಕ (31) ಇವೆ. ಈಶಾನ್ಯ ಭಾರತದಲ್ಲಿ ಯಾವುದೇ ಒಮೈಕ್ರಾನ್ ಪ್ರಕರಣ ವರದಿಯಾಗಿಲ್ಲ. ಶುಕ್ರವಾರದವರೆಗೆ ದೇಶದಲ್ಲಿ 358 ಒಮೈಕ್ರಾನ್ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 183 ಪ್ರಕರಣಗಳನ್ನು ವಿಶ್ಲೇಷಣೆಗೊಳಪಡಿಸಿದ್ದು,ಅವರಲ್ಲಿ 91 ಜನರು ಸಂಪೂರ್ಣ ಲಸಿಕೆ ಡೋಸ್ಗಳನ್ನು ತೆಗೆದುಕೊಂಡಿದ್ದರೆ, ಮೂವರು ಬೂಸ್ಟರ್ ಡೋಸ್ಗಳನ್ನು ಪಡೆದಿದ್ದರು. ಶೇ.70ರಷ್ಟು ಜನರು ಲಕ್ಷಣರಹಿತರಾಗಿದ್ದರು.
ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗಳ ಹಿನ್ನೆಲೆಯಲ್ಲಿ ಇನ್ನಷ್ಟು ಕೋವಿಡ್ ನಿರ್ಬಂಧಗಳನ್ನು ಹೇರಲಾಗಿದೆ. ಮಹಾರಾಷ್ಟ್ರದಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಐದು ಅಥವಾ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಹರ್ಯಾಣ ಮತ್ತು ದಿಲ್ಲಿಗಳಲ್ಲಿಯೂ ನಿರ್ಬಂಧಗಳನ್ನು ಬಿಗುಗೊಳಿಸಲಾಗಿದೆ,ಆದರೆ ದಿಲ್ಲಿಯಲ್ಲಿ ಪ್ರಾರ್ಥನಾ ಸ್ಥಳಗಳನ್ನು ತೆರೆದಿಡಲು ಅವಕಾಶ ನೀಡಲಾಗಿದೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 3,47,79,815ಕ್ಕೆ ಏರಿಕೆಯಾಗಿದ್ದು,ಶನಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 7,189 ಹೊಸ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 77,032ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯವು ತಿಳಿಸಿದೆ.