ವಿಶ್ವದ ಶಕ್ತಿಶಾಲಿ ದೂರದರ್ಶಕ ಬಾಹ್ಯಾಕಾಶಕ್ಕೆ ರವಾನೆ

photo:twitter/@NASA
ನ್ಯೂಯಾರ್ಕ್, ಡಿ.25: ಬ್ರಹ್ಮಾಂಡದೊಳಗೆ ಇನ್ನಷ್ಟು ದೂರಕ್ಕೆ ಇಣುಕಿ ನೋಡಲು ರೂಪಿಸಲಾದ ಕ್ರಾಂತಿಕಾರಿ ಸಾಧನ, ಅತ್ಯಂತ ಶಕ್ತಿಶಾಲಿಯಾದ ಬಾಹ್ಯಾಕಾಶ ದೂರದರ್ಶಕ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಅನ್ನು ದಕ್ಷಿಣ ಅಮೆರಿಕದ ಈಶಾನ್ಯ ಕರಾವಳಿಯ ಕೇಂದ್ರದಿಂದ ನಾಸಾವು ಬಾಹ್ಯಾಕಾಶಕ್ಕೆ ರವಾನಿಸಿದೆ.
ಮುಂದಿನ ದಶಕದ ಶಕ್ತಿಶಾಲಿ ದೂರದರ್ಶಕ ಎಂದು ನಾಸಾ ಬಣ್ಣಿಸಿರುವ ಈ ದೂರದರ್ಶಕವನ್ನು ಹೊತ್ತ ಆರಿಯನ್ 5 ರಾಕೆಟ್ ಅನ್ನು ಫ್ರೆಂಚ್ ಗಯಾನಾದ ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಕೇಂದ್ರದಿಂದ ಬಾಹ್ಯಾಕಾಶಕ್ಕೆ ಉಡಾಯಿಸಲಾಗಿದ್ದು ಈ ಪ್ರಕ್ರಿಯೆಯನ್ನು ನಾಸಾ-ಇಎಸ್ಎ ಜಂಟಿ ವೆಬ್ಸೈಟಿನಲ್ಲಿ ನೇರಪ್ರಸಾರ ಮಾಡಲಾಗಿದೆ.
ಉಡಾವಣೆಗೊಂಡ 26 ನಿಮಿಷದ ಬಳಿಕ ಬಾಹ್ಯಾಕಾಶದಲ್ಲಿ ಈ 14,000 ಪೌಂಡ್ ತೂಕದ, 1 ಟೆನಿಸ್ ಕೋರ್ಟ್ನಷ್ಟು ವ್ಯಾಪ್ತಿಯ ಸಾಧನ ನಿಧಾನವಾಗಿ ಬಿಚ್ಚಿಕೊಂಡು ಮುಂದಿನ 13 ದಿನ ಸಂಚರಿಸಿ ಭೂಮಿಯಿಂದ 1 ಮಿಲಿಯನ್ ಮೈಲು ದೂರದ ಸೌರಕಕ್ಷೆಯನ್ನು ಸೇರುತ್ತದೆ. ಈ ದೂರದರ್ಶಕದ ವಿಶೇಷ ಕಕ್ಷೆಯ ಮಾರ್ಗವು ದೂರದರ್ಶಕವು ಭೂಮಿಯೊಂದಿಗೆ ಏಕಕಾಲದಲ್ಲಿ ಸುತ್ತುತ್ತಿರುವಾಗ ಭೂಮಿಯೊಂದಿಗೆ ನಿರಂತರ ಸಂಪರ್ಕ ಸಾಧ್ಯವಾಗಿಸುತ್ತದೆ.





