ದಂಪತಿ ಜಗಳದಲ್ಲಿ ಲಾಭಕ್ಕೆ ಯತ್ನ ಆರೋಪ: ಇನ್‌ಸ್ಪೆಕ್ಟರ್ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್

ಬೆಂಗಳೂರು, ಡಿ.25: ದಂಪತಿ ಜಗಳದಲ್ಲಿ ಲಾಭ ಪಡೆಯಲು ಯತ್ನಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಎಫ್‌ಐಆರ್ ದಾಖಲು ಮಾಡಿದೆ.
ಕೆಆರ್‌ಪುರ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ಜಯರಾಜ್, ಎಎಸ್ಸೈ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಏನಿದು ಪ್ರಕರಣ?: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂಜು ರಾಜನ್ ಎಂಬವರ ವಿರುದ್ಧ ಆಕೆಯ ಪತ್ನಿ ದೂರು ದಾಖಲಿಸಿದ್ದರು. ಹೀಗಾಗಿ ಬಂಧನಕ್ಕೆ ಒಳಗಾಗಿದ್ದ ಸಂಜು ರಾಜನ್ ಬಳಿಕ ಜಾಮೀನಿನ ಮೇರೆಗೆ ಹೊರಬಂದಿದ್ದರು.
ನಂತರ ಪ್ರತಿವಾರ ಠಾಣೆಗೆ ಆಗಮಿಸಿ ಸಹಿ ಮಾಡಲು ಸಂಜು ಅವರಿಂದ ಪೊಲೀಸರು 500ರಿಂದ 10 ಸಾವಿರ ರೂ. ವರೆಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಲಂಚ ಪಡೆದ ಬಗ್ಗೆ ದೂರು ಪಡೆದು ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳು, ಇನ್‌ಸ್ಪೆಕ್ಟರ್ ವಿರುದ್ಧ ಕ್ರಮಕ್ಕೆ 17ಎ ಅಡಿ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಅಲ್ಲಿಂದ ಅನುಮತಿ ಸಿಕ್ಕ ಬಳಿಕ ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದಾರೆ.
ಜಯರಾಜ್ ಸದ್ಯ ಸಿಐಡಿಯಲ್ಲಿ ಕೆಲಸ ಮಾಡುತ್ತಿದ್ದು, ಶಿವಕುಮಾರ್ ಕೆ.ಆರ್.ಪುರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.







