ಆನೇಕಲ್-ನೆಲಮಂಗಲ ರಸ್ತೆ ಅಗಲೀಕರಣ: 18 ಮರಗಳ ತೆರವಿಗೆ ಹೈಕೋರ್ಟ್ ಅನುಮತಿ
ಬೆಂಗಳೂರು, ಡಿ.25: ಆನೇಕಲ್-ನೆಲಮಂಗಲ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ 18 ಪಾರಂಪರಿಕ ಮರಗಳನ್ನು ತೆರವುಗೊಳಿಸಲು ಹೈಕೋರ್ಟ್ ಅನುಮತಿ ನೀಡಿದೆ.
ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳಿಗೆ ನಗರದಲ್ಲಿರುವ ಮರಗಳನ್ನು ತೆರವು ಮಾಡುತ್ತಿರುವ ಕ್ರಮ ಪ್ರಶ್ನಿಸಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಹಾಗೂ ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಮರಗಳನ್ನು ಕತ್ತರಿಸಬೇಕೇ ಬೇಡವೇ ಎಂಬ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ನಾವು ತಜ್ಞರಲ್ಲ. ಆದರೆ, ಮರಗಳ ತೆರವು ಸಂಬಂಧ ಜಿಕೆವಿಕೆ ತಜ್ಞರ ಸಮಿತಿ ವರದಿ ನೀಡಿದೆ. ಅದರಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ತೆರವು ಮಾಡಲು ಉದ್ದೇಶಿಸಿರುವ 18 ಮರಗಳನ್ನು ಕತ್ತರಿಸಿ, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಂದುವರೆಸಬಹುದು ಎಂದು ಪೀಠ ಆದೇಶಿಸಿದೆ.
ಇದೇ ವೇಳೆ ತಜ್ಞರ ಸಮಿತಿ ವರದಿಯಂತೆ 9 ಮರಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಹಾಗೂ ಅವುಗಳನ್ನು ನಿರ್ವಹಣೆ ಮಾಡಬೇಕು. ಅಲ್ಲದೇ, ಕತ್ತರಿಸುವ ಮರಗಳಿಗೆ ಪರ್ಯಾಯವಾಗಿ ಹೆಚ್ಚಿನ ಗಿಡಗಳನ್ನು ನೆಟ್ಟು ಅರಣ್ಯೀಕರಣ ಕೈಗೊಳ್ಳಬೇಕು ಎಂದು ಆದೇಶಿಸಿದೆ.





