ಗ್ರೀಸ್: ದೋಣಿ ಮುಳುಗಿ ಕನಿಷ್ಟ 16 ವಲಸಿಗರ ಮೃತ್ಯು

ಸಾಂದರ್ಭಿಕ ಚಿತ್ರ
ಗ್ರೀಸ್, ಡಿ.25: ಶುಕ್ರವಾರ ತಡರಾತ್ರಿ ಗ್ರೀಸ್ ಬಳಿಯ ಅಜಿಯನ್ ಸಮುದ್ರದಲ್ಲಿ ವಲಸಿಗರು ಪ್ರಯಾಣಿಸುತ್ತಿದ್ದ ದೋಣಿ ಮುಳುಗಿ ಕನಿಷ್ಟ 16 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ದುರಂತ ನಡೆದ ಪ್ರದೇಶದಲ್ಲಿ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದ ತಂಡ 12 ಪುರುಷರ, 3 ಮಹಿಳೆಯರ ಹಾಗೂ ಒಂದು ಮಗುವಿನ ಮೃತದೇಹ ಪತ್ತೆಹಚ್ಚಿದೆ ಎಂದು ಗ್ರೀಸ್ ಕರಾವಳಿ ಕಾವಲು ಪಡೆ ಅಧಿಕಾರಿಗಳು ಹೇಳಿದ್ದಾರೆ.
ಇದು ಕಳೆದ 3 ದಿನದಲ್ಲಿ ಗ್ರೀಸ್ನ ಸಮುದ್ರವ್ಯಾಪ್ತಿಯಲ್ಲಿ ನಡೆದ 3ನೇ ದೋಣಿ ದುರಂತವಾಗಿದ್ದು ಒಟ್ಟು 30 ವಲಸಿಗರು ಮೃತಪಟ್ಟಿದ್ದಾರೆ. ಶುಕ್ರವಾರದ ದುರಂತ ಪರೋಸ್ ದ್ವೀಪದ ಸುಮಾರು 8 ಕಿ.ಮೀ ದೂರದಲ್ಲಿ ಸಂಭವಿಸಿದ್ದು ದೋಣಿಯಲ್ಲಿ ಸುಮಾರು 80 ಮಂದಿ ಪ್ರಯಾಣಿಕರಿದ್ದರು. 62 ಮಂದಿಯನ್ನು ರಕ್ಷಿಸಲಾಗಿದ್ದು ಕನಿಷ್ಟ 13 ಮಂದಿ ಮೃತರಾಗಿದ್ದಾರೆ. ಬದುಕುಳಿದವರ ಶೋಧ ಮತ್ತು ರಕ್ಷಣೆ ಕಾರ್ಯಾಚರಣೆಯಲ್ಲಿ ಕರಾವಳಿ ಗಸ್ತು ಪಡೆಯ 5 ದೋಣಿ, 9 ಖಾಸಗಿ ದೋಣಿಗಳು, ಹೆಲಿಕಾಪ್ಟರ್ ಮತ್ತು ಸೇನೆಯ ಸಾರಿಗೆ ವಿಮಾನವನ್ನು ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟರ್ಕಿಯಿಂದ ಇಟಲಿಗೆ ವಲಸಿಗರನ್ನು ಅಕ್ರಮವಾಗಿ ಸಾಗಿಸುವ ದೋಣಿಗಳು ಸಾಂಪ್ರದಾಯಿಕ ಪೂರ್ವ ಅಜಿಯನ್ ಸಮುದ್ರಮಾರ್ಗದ ಬದಲು(ಇಲ್ಲಿ ಗ್ರೀಸ್ನ ಕರಾವಳಿ ಕಾವಲುಪಡೆ ನಿರಂತರ ಗಸ್ತು ತಿರುಗುತ್ತಿದೆ) ಅಪಾಯಕಾರಿ ಮಾರ್ಗದ ಮೂಲ ಪ್ರಯಾಣಿಸುತ್ತಿರುವುದು ದುರಂತ ಪ್ರಕರಣ ಹೆಚ್ಚಳಕ್ಕೆ ಕಾರಣ ಎಂದು ವರದಿಯಾಗಿದೆ. ಗುರುವಾರ, ಅಥೆನ್ಸ್ ನ ದಕ್ಷಿಣದ ಆ್ಯಂಟಿಕಿಥೆರ ದ್ವೀಪದ ಬಳಿಯ ಸಮುದ್ರದಲ್ಲಿ ದೋಣಿ ಮುಳುಗಿ 11 ಮಂದಿ ಮೃತರಾಗಿದ್ದರು. ಶುಕ್ರವಾರ ನಡೆದ ಮತ್ತೊಂದು ದೋಣಿ ದುರಂತದಲ್ಲಿ ಫೊಲೆಗಾಂಡ್ರೋಸ್ ದ್ವೀಪದ ಬಳಿ ದೋಣಿ ಮುಳುಗಿ ಕನಿಷ್ಟ 3 ವಲಸಿಗರು ಮೃತಪಟ್ಟಿದ್ದು 13 ಮಂದಿಯನ್ನು ರಕ್ಷಿಸಲಾಗಿತ್ತು.
ಈ ವರ್ಷ ಅಜಿಯನ್ ಸಮುದ್ರವ್ಯಾಪ್ತಿಯಲ್ಲಿ ನಡೆದ ಅತ್ಯಂತ ಘೋರ ದುರಂತ ಇದಾಗಿದೆ ಎಂದು ವಿಶ್ವಸಂಸ್ಥೆ ವಲಸಿಗರ ಹಿತರಕ್ಷಣೆ ಸಂಸ್ಥೆ ಯುಎನ್ಎಚ್ಸಿಆರ್ ಹೇಳಿದೆ. ವಲಸಿಗರು ಸುರಕ್ಷತೆಯ ತಾಣ ಅರಸಿಕೊಂಡು ಅತ್ಯಂತ ಅಪಾಯಕಾರಿ ಸಮುದ್ರಯಾನ ಮುಂದುವರಿಸುತ್ತಿರುವುದನ್ನು ಈ ಘಟನೆ ನೆನಪಿಸುತ್ತದೆ ಎಂದು ಯುಎನ್ಎಚ್ಸಿಆರ್ಯ ಗ್ರೀಸ್ ಪ್ರತಿನಿಧಿ ಅಡ್ರಿಯಾನೊ ಸಿಲ್ವೆಸ್ಟ್ರಿ ಹೇಳಿದ್ದಾರೆ. ಈ ವರ್ಷದ ಜನವರಿಯಿಂದ ನವೆಂಬರ್ವರೆಗಿನ ಅವಧಿಯಲ್ಲಿ ಯುರೋಪ್ ಗೆ ತೆರಳುವ ಪ್ರಯತ್ನದಲ್ಲಿ ಕನಿಷ್ಟ 2,500 ಮಂದಿ ಮೃತರಾಗಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂದು ಯುಎನ್ಎಚ್ಸಿಆರ್ ಹೇಳಿದೆ.







