ಅನಾರೋಗ್ಯದಿಂದ ಜಾಮೀನಿನಲ್ಲಿರುವ ಸಂಸದೆ ಪ್ರಜ್ಞಾ ಠಾಕೂರ್ ಕ್ರಿಕೆಟ್ ಆಡುತ್ತಿರುವ ವೀಡಿಯೊ ವೈರಲ್

Photo: Twitter/@ndtv
ಭೋಪಾಲ್: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಅನಾರೋಗ್ಯದ ಕಾರಣದಿಂದಾಗಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ಅವರು ಸಾಮಾನ್ಯವಾಗಿ ಗಾಲಿಕುರ್ಚಿಯಲ್ಲಿ ಚಲಿಸುತ್ತಿದ್ದರೂ ಕೂಡ ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚಿನ ವೀಡಿಯೊದಲ್ಲಿ, ಅವರು ಮಧ್ಯಪ್ರದೇಶದ ಭೋಪಾಲ್ನಲ್ಲಿ ಕ್ರಿಕೆಟ್ ಆಡುತ್ತಿರುವುದು ಕಂಡುಬಂದಿದೆ.
ಸುಮಾರು ಒಂದು ನಿಮಿಷದ ವೀಡಿಯೊದಲ್ಲಿ ಠಾಕೂರ್ ಭೋಪಾಲ್ನ ಶಕ್ತಿ ನಗರ ಪ್ರದೇಶದಲ್ಲಿ ಬ್ಯಾಟ್ನಿಂದ ಚೆಂಡನ್ನು ಹೊಡೆಯುತ್ತಿರುವುದು, ಹಲವಾರು ಜನರು ಹರ್ಷೋದ್ಗಾರ ಮಾಡುವುದು ಕಂಡುಬಂದಿದೆ.
ಅನಾರೋಗ್ಯದ ಕಾರಣ ನೀಡಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿದ್ದ ಠಾಕೂರ್ ಈ ಹಿಂದೆ ಗರ್ಬಾ ನೃತ್ಯ ಮಾಡುವ ಮೂಲಕ ಹಾಗೂ ಬಾಸ್ಕೆಟ್ ಬಾಲ್ ಆಡುವುದರ ಮೂಲಕ ವಿರೋಧ ಪಕ್ಷಗಳಿಂದ ಠಾಕೂರ್ ಟೀಕೆಗೆ ಒಳಗಾಗಿದ್ದರು.
ವೈರಲ್ ಆಗಿರುವ ಇತ್ತೀಚಿನ ವೀಡಿಯೊಗಳಲ್ಲಿ ಬಿಜೆಪಿ ಸಂಸದೆ ಯಾವುದೇ ಅನಾರೋಗ್ಯದ ಲಕ್ಷಣವನ್ನು ತೋರ್ಪಡಿಸಿಲ್ಲ ಎಂದು ಟೀಕಾಕಾರರು ಹೇಳಿದ್ದಾರೆ.
ಅಕ್ಟೋಬರ್ನಲ್ಲಿ ನವರಾತ್ರಿ ಆಚರಣೆಗಳಲ್ಲಿ ಭಾಗವಹಿಸಿದ್ದ ಠಾಕೂರ್ ಗರ್ಬಾ ನೃತ್ಯಕ್ಕೆ ಹೆಜ್ಜೆ ಹಾಕಿದ್ದರು ಹಾಗೂ ಕೆಲವು ದಿನಗಳ ನಂತರ ಭೋಪಾಲ್ನಲ್ಲಿ ಬಾಸ್ಕೆಟ್ಬಾಲ್ ಆಡುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಅವರು ಅಕ್ಟೋಬರ್ನಲ್ಲಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತಮ್ಮ ಕ್ಷೇತ್ರವಾದ ಭೋಪಾಲ್ನ ಮೈದಾನದಲ್ಲಿ ಮಹಿಳಾ ಆಟಗಾರ್ತಿಯರೊಂದಿಗೆ ಕಬಡ್ಡಿಯನ್ನು ಆನಂದಿಸಿದ್ದರು.
ಪ್ರಜ್ಞಾ ಠಾಕೂರ್ 2008 ರಲ್ಲಿ 10 ಜನರನ್ನು ಬಲಿ ಪಡೆದ ಹಾಗೂ ಅನೇಕರು ಗಾಯಗೊಂಡ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) 2017 ರಲ್ಲಿ ಆರೋಗ್ಯದ ಆಧಾರದ ಮೇಲೆ ಠಾಕೂರ್ ಗೆ ಜಾಮೀನು ನೀಡಿತು. 2019 ರ ಲೋಕಸಭಾ ಚುನಾವಣೆಯಲ್ಲಿ ಠಾಕೂರ್ ಭೋಪಾಲ್ನಿಂದ ಸ್ಪರ್ಧಿಸಿ ಪ್ರತಿಸ್ಪರ್ಧಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಸೋಲಿಸಿದ್ದರು.
ಠಾಕೂರ್ ಅವರು ನವೆಂಬರ್ನಲ್ಲಿ ಮುಂಬೈನ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿದ್ದರು ಹಾಗೂ ಸಮನ್ಸ್ ಬಂದಾಗಲೆಲ್ಲಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.
Out on bail in the Malegaon blasts case on medical grounds, BJP MP Pragya Singh Thakur was seen playing cricket in Shakti nagar Bhopal.She came under fire after a video of her playing kabaddi and basketball surfaced few days back @ndtv @ndtvindia @manishndtv @GargiRawat pic.twitter.com/KZWsSrWmjs
— Anurag Dwary (@Anurag_Dwary) December 26, 2021







