ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪ್ರತೀ ವರ್ಷ 50 ಲ.ರೂ ದೇಣಿಗೆ: ಸದಾಶಿವ ಶೆಟ್ಟಿ ಕನ್ಯಾನ ಘೋಷಣೆ

ಮಂಗಳೂರು : ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರಾಗಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕಷ್ಟದಲ್ಲಿರುವ ಜನರನ್ನು ಗುರುತಿಸಿ ಕಣ್ಣೀರೊರೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ. ಈ ಸೇವಾ ಕೈಂಕರ್ಯದಲ್ಲಿ ನನಗೆ ತೃಪ್ತಿ ಇದೆ. ಹೀಗಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪ್ರತೀ ವರ್ಷ ತನ್ನ ಸಂಸ್ಥೆಯಿಂದ 50 ಲಕ್ಷ ರೂ. ದೇಣಿಗೆ ನೀಡುವುದಾಗಿ ಮುಂಬೈಯ ಹೇರಂಬ ಇಂಡಸ್ಟ್ರೀಸ್‌ನ ಅಧ್ಯಕ್ಷ, ಒಕ್ಕೂಟದ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ ತಿಳಿಸಿದರು.
ನಗರದ ಬಂಟ್ಸ್ ಹಾಸ್ಟೇಲ್ನ ಅಮೃತಮಹೋತ್ಸವ ಕಟ್ಟಡದಲ್ಲಿ ಜರಗಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮೇಯರ್ ಪ್ರೇಮಾನಂದ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಭಾಸ್ಕರ್ ರೈ ಕಟ್ಟ, ಶರತ್ ಶೆಟ್ಟಿ ಕಿನ್ನಿಗೋಳಿ, ನವೀನ್ ಶೆಟ್ಟಿ ಎಡ್ಮೆಮಾರ್, ನಯನಾ ಶೆಟ್ಟಿ , ಲೀಲಾಕ್ಷ ಕರ್ಕೇರಾ, ಸ್ಫೂರ್ತಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಮಾಜ ಕಲ್ಯಾಣ ಯೋಜನೆಯಡಿ 68 ಮಂದಿಗೆ 11 ಲಕ್ಷ ರೂ. ಪರಿಹಾರ ಧನದ ಚೆಕ್ ಹಸ್ತಾಂತರಿಸಲಾಯಿತು.
ಒಕ್ಕೂಟದ ಪೋಷಕ, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ದಾಸ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲು, ಒಕ್ಕೂಟದ ಪೋಷಕರಾದ ಥಾಣೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.







