ಕೋವಿಡ್ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು,ಡಿ.26: ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರವಿವಾರ ಮೈಸೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಅಕ್ಕ ಪಕ್ಕದ ರಾಜ್ಯಗಳಲ್ಲಿ ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯಾಗಿ ರಾಜ್ಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಬದಲಾವಣೆ ಇಲ್ಲ ಎಂದು ಹೇಳಿದರು
ಓಮಿಕ್ರಾನ್ ಈಗಾಗಲೇ ಆತಂಕವನ್ನು ಉಂಟು ಮಾಡಿದ್ದು ದೇಶಾದ್ಯಂತ ಕಟ್ಟೆಚರ ವಹಿಸಲಾಗಿದೆ. ಹಾಗಾಗಿ ರಾಜ್ಯದಲ್ಲೂ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಫೆಬ್ರವರಿಯಲ್ಲಿ ಓಮಿಕ್ರಾನ್ ಹೆಚ್ಚಾಗಲಿದೆ ಎಂಬುದಕ್ಕೆ ಪುರಾವೆ ಇಲ್ಲ, ಸಂಶೋಧನೆಯೂ ನಡೆದಿಲ್ಲ, ಅದರೂ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ ಎಂದು ಹೇಳಿದರು.
ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಓಮಿಕ್ರಾನ್ ಹರಡಲು ದಾರಿ ಮಾಡಿಕೊಡದಿರಲಿ ಎಂದು ಡಿ.28 ರಿಂದ ಜ.7 ರ ವರೆಗೆ ರಾಜ್ಯ ಸರ್ಕಾರ ನೈಟ್ ಕಫ್ರ್ಯೂ ಜಾರಿಗೊಳಿಸಲು ತಿಳಿಸಿದ್ದೇನೆ. ಕಫ್ರ್ಯೂಗೆ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ಜನರ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು.







