ನಾಲ್ಕನೆ ಹಂತದ 'ಸ್ವಚ್ಛ ಕಡಲ ತೀರ ಹಸಿರು ಕೋಡಿ' ಅಭಿಯಾನ ಯಶಸ್ವಿ

ಕುಂದಾಪುರ, ಡಿ.26: ‘ಸ್ವಚ್ಛ ಕಡಲ ತೀರ, ಹಸಿರು ಕೋಡಿ’ ಅಭಿಯಾನದ ನಾಲ್ಕನೆ ಹಂತವನ್ನು ರವಿವಾರ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ಬ್ಯಾರೀಸ್ ವಿದ್ಯಾ ಸಂಸ್ಥೆಗಳು, ಕುಂದಾಪುರ ಪುರಸಭೆ ಮತ್ತು ಕೋಡಿ ಸ್ಥಳೀಯರ ಸಹಯೋಗದೊಂದಿಗೆ ಹಳವಳ್ಳಿಯಿಂದ ಕೋಡಿಯ ಸೀ ವಾಕ್ ವರೆಗಿನ 4 ಕಿಲೋ ಮೀಟರ್ ದೂರದ ಕಡಲ ತೀರ ಹಾಗು ತೀರದ ಪಕ್ಕದಲ್ಲಿರುವ ರಸ್ತೆಯನ್ನು ಸ್ವಚ್ಛಗೊಳಿಸಲಾಯಿತು. ಪುರಸಭೆಯ ಸಹಕಾರದೊಂದಿಗೆ ಕಸದ ವಿಲೇವಾರಿಯನ್ನು ಮಾಡಲಾಯಿತು.
ಅಭಿಯಾನವನ್ನುದ್ದೇಶಿಸಿ ಮಾತನಾಡಿದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯ್ಯದ್ ಮೊಹಮ್ಮದ್ ಬ್ಯಾರಿ, ನಿರಂತರವಾಗಿ ಪ್ರತಿ ತಿಂಗಳ ಕೊನೆಯ ರವಿವಾರ ನಡೆದುಕೊಂಡು ಬರುತ್ತಿರುವ ಈ ಅಭಿಯಾನ ಇಂದು ಈ ವರ್ಷದ ಅಂತಿಮ ಯಶಸ್ವಿ ಸಂಯೋಜನೆಯಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲರ ಸಹಕಾರದಿಂದ ಈ ಅಭಿಯಾನದ ಹಂತಗಳು ಇನ್ನಷ್ಟು ಹುಮ್ಮಸು ಮತ್ತು ಬದ್ಧತೆಯೊಂದಿಗೆ ನಡೆಯುವ ನಂಬಿಕೆ ಹೊಂದಿರುವುದಾಗಿ ಅವರು ತಿಳಿಸಿದರು.
ಸ್ವಚ್ಛ ಮನಸ್ಸಿನಿಂದ ಮಾಡುವ ಯಾವುದೇ ಕಾರ್ಯ ನಿರಂತರವಾಗಿ ನಡೆಯುತ್ತದೆ ಎಂಬ ವಿಶ್ವಾಸವನ್ನು ಸೈಯ್ಯದ್ ಮೊಹಮ್ಮದ್ ಬ್ಯಾರಿ ವ್ಯಕ್ತಪಡಿಸಿದರು.
ಬ್ಯಾರೀಸ್ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಕುಂದಾಪುರ ಪುರಸಭೆಯ ಕೌನ್ಸಿಲರ್ ಗಳು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ವಿವಿಧ ಸಂಘಟನೆಗಳ ಸದಸ್ಯರು ಹಾಗು ಸ್ಥಳೀಯರು ಪಾಲ್ಗೊಂಡಿದ್ದರು.
ಈ ಅಭಿಯಾನದಲ್ಲಿ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗು ಪ್ರಾಂಶುಪಾಲರು ಭಾಗವಹಿಸಿದ್ದರು.






.jpeg)
.jpeg)

