ನಿರ್ದೇಶಕರನ್ನು ವಜಾಗೊಳಿಸಿ, ರಂಗಾಯಣ ಉಳಿಸಿ: 50ಕ್ಕೂ ಹೆಚ್ಚು ನಾಡಿನ ಗಣ್ಯ ಸಾಹಿತಿ, ಕಲಾವಿದರಿಂದ ಬಹಿರಂಗ ಪತ್ರ

ಮೈಸೂರು ರಂಗಾಯಣ
ಬೆಂಗಳೂರು, ಡಿ.26: ನಮ್ಮ ನಾಡಿನ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರ ಮೈಸೂರಿನ ರಂಗಾಯಣವು ವಿವಾದ ಕೇಂದ್ರವಾಗಿ ಮಾರ್ಪಾಡಾಗಿದೆ. ರಾಜ್ಯ ಬಿಜೆಪಿ ಸರಕಾರವು ಅಡ್ಡಂಡ ಕಾರ್ಯಪ್ಪರನ್ನು ಕೇಂದ್ರದ ನಿರ್ದೇಶಕನಾಗಿ ನೇಮಕ ಮಾಡಿದಂದಿನಿಂದ ವಿವಾದ ಸೃಷ್ಟಿಯಾಗಿದೆ. ಆದುದರಿಂದ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡುವಂತೆ ಹಿರಿಯ ಚಿಂತಕ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಸೇರಿದಂತೆ 50ಕ್ಕೂ ಹೆಚ್ಚು ನಾಡಿನ ಗಣ್ಯ ಸಾಹಿತಿ ಕಲಾವಿದರು ಸರಕಾರಕ್ಕೆ ಬಹಿರಂಗ ಪತ್ರ ಬರೆದು ಒತ್ತಾಯಿಸಿದ್ದಾರೆ.
ಅಡ್ಡಂಡ ಕಾರ್ಯಪ್ಪ ಆರೆಸ್ಸೆಸ್ ನ ನಿಷ್ಠಾವಂತ ಕಾರ್ಯಕರ್ತನಂತೆ ಕೋಮುವಾದಿ ಭಾವನೆಗಳನ್ನು ಬಿತ್ತುತ್ತಿದ್ದಾರೆ. ರಂಗಾಯಣಕ್ಕೆ ಸಂಬಂಧಿಸದ ಚಕ್ರವರ್ತಿ ಸೂಲಿಬೆಲೆ ಮತ್ತು ಮಾಳವಿಕರನ್ನು ರಂಗಾಯಣಕ್ಕೆ ಸ್ವಾಗತಿಸಿ ಅವರ ಕೋಮುವಾದಿ ಭಾಷಣವನ್ನುಸಮರ್ಥಿಸಿಕೊಂಡಿದ್ದಾರೆ. ಅನಗತ್ಯವಾಗಿ ಟಿಪ್ಪು ಸುಲ್ತಾನ್ ವಿವಾದವನ್ನು ಎತ್ತಿದ್ದಾರೆ.
ಇದು ರಾಜ್ಯದ ಸಾಂಸ್ಕೃತಿಕ ಲೋಕಕ್ಕೆ ಆಗುತ್ತಿರುವ ಅವಮಾನವಾಗಿದ್ದು, ರಂಗಾಯಣ ಇತಿಹಾಸದಲ್ಲಿ ಇಂತಹ ಎಡ-ಬಲ ವಿವಾದ ಸೃಷ್ಟಿಯಾಗಿರಲಿಲ್ಲ. ಬಿ.ವಿ.ಕಾರಂತರ ಕನಸಿನ ಕೂಸಾದ ರಂಗಾಯಣ ಕೇವಲ ಸಮನ್ವಯ ಸಾಂಸ್ಕೃತಿಕ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಇಂದು ನಿರ್ದೇಶಕರು ಬಲಪಂಥೀಯ ವಿಚಾರಗಳನ್ನು ಬಲವಂತವಾಗಿ ಹೇರುತ್ತಿದ್ದಾರೆ. ಆದುದರಿಂದ ಡಿ.20ರಿಂದ ನಿರ್ದೇಶಕರನ್ನು ವಜಾಗೊಳಿಸಿ, ರಂಗಾಯಣ ಉಳಿಸಿ ಎಂಬ ಸಾಂಸ್ಕೃತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಆದುದರಿಂದ ಸರಕಾರವು ನಿರ್ದೇಶಕರನ್ನು ಕೂಡಲೆ ವಜಾ ಮಾಡಬೇಕು ಎಂದು 50ಕ್ಕೂ ಹೆಚ್ಚು ಸಾಹಿತಿ ಕಲಾವಿದರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.








