ಕರ್ನಾಟಕ ಬಂದ್‍ಗೆ ನೈತಿಕ ಬೆಂಬಲವಿದೆ: ಸಿದ್ದರಾಮಯ್ಯ

ಬೆಂಗಳೂರು, ಡಿ.26: ಕರ್ನಾಟಕ ಬಂದ್‍ಗೆ ನಮ್ಮ ನೈತಿಕ ಬೆಂಬಲವಿದೆ ಹಾಗೂ ಎಂಇಎಸ್ ಪುಂಡರ ವಿರುದ್ಧ ಸದನದಲ್ಲಿ ದೇಶದ್ರೋಹ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಲಂಡನ್‍ನ ಬಹುರೂಪಿ ಹಾಗೂ ಬಸವ ಅಂತರಾಷ್ಟ್ರೀಯ ಪ್ರತಿಷ್ಠಾನ ಆಯೋಜಿಸಿದ್ದ ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದವರ ವಿರುದ್ಧ ಅಲ್ಲಿನ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಕರ್ನಾಟಕ ಸರಕಾರ ಸದನದಲ್ಲಿ ಕೈಗೊಂಡ ನಿರ್ಣಯವನ್ನು ಮಹಾರಾಷ್ಟ್ರ ಸರಕಾರಕ್ಕೆ ಕಳುಹಿಸಿ ಪುಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕೆಂದು ಹೇಳಿದರು.
ನೈಟ್ ಕರ್ಫ್ಯೂ ಜಾರಿಗೆ ಸಿದ್ಧತೆ ವಿಚಾರವಾಗಿ ಮಾತನಾಡಿ, ಒಮೈಕ್ರಾನ್ ನಿಯಂತ್ರಣಕ್ಕೆ ಸರಕಾರ ಅಗತ್ಯ ಕ್ರಮಕೈಗೊಳ್ಳಲಿ. ಇದರಲ್ಲಿ ನಮ್ಮ ಆಕ್ಷೇಪ ಏನೂ ಇಲ್ಲ ಎಂದು ಹೇಳಿದರು.
ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ: ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಇದ್ದಾರೆ. ನಾನು ಶಾಸಕಾಂಗ ಪಕ್ಷದ ನಾಯಕನಾಗಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಉಳಿದ ನಾಯಕರೂ ಇದ್ದಾರೆ. ಎಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.







