ಕಾಶ್ಮೀರ: ಶಂಕಿತ ಉಗ್ರನ ಹತ್ಯೆ
ಶ್ರೀನಗರ, ಡಿ. 26: ಅನಂತ್ನಾಗ್ನ ಕಾಲನ್ ಸಿರ್ಗುಫ್ವಾರಾ ಪ್ರದೇಶದಲ್ಲಿ ಶಂಕಿತ ಉಗ್ರನೋರ್ವನನ್ನು ಭದ್ರತಾ ಪಡೆ ಶನಿವಾರ ಹತ್ಯೆಗೈದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿರ್ಗುಫ್ವಾರಾ ಪ್ರದೇಶದಲ್ಲಿ ಶಂಕಿತ ಉಗ್ರನೋರ್ವ ಅಡಗಿರುವ ಕುರಿತು ಸ್ವೀಕರಿಸಿದ ಮಾಹಿತಿ ಆಧಾರದಲ್ಲಿ ಪೊಲೀಸ್ ಹಾಗೂ ಸೇನೆಯ 3 ರಾಷ್ಟ್ರೀಯ ರೈಫಲ್ಸ್ ಶನಿವಾರ ಆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂದರ್ಭ ಶಂಕಿತ ಉಗ್ರ ಇರುವುದು ದೃಢಪಟ್ಟಿತ್ತು. ಆತನಿಗೆ ಶರಣಾಗಲು ಸೂಚಿಸಲಾಯಿತು.
ಆದರೆ, ಶರಣಾಗಲು ನಿರಾಕರಿಸಿದ ಆತ ಜಂಟಿ ಕಾರ್ಯಾಚರಣೆ ಪಡೆ ಮೇಲೆ ವಿವೇಚನಾರಹಿತವಾಗಿ ಗುಂಡಿನ ದಾಳಿ ನಡೆಸಿದ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆ ಪ್ರತಿ ದಾಳಿ ನಡೆಸಿತು. ಈ ಗುಂಡಿನ ಚಕಮಕಿಯಲ್ಲಿ ಶಂಕಿತ ಉಗ್ರ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಎನ್ಕೌಂಟರ್ ನಡೆದ ಸ್ಥಳದಲ್ಲಿ ಆತನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಶಂಕಿತ ಉಗ್ರನನ್ನು ಫಾಹೀಮ್ ಭಟ್ ಎಂದು ಗುರುತಿಸಲಾಗಿದೆ. ಅನಂತ್ನಾಗ್ ನ ಕಂಡಿಪೋರದ ನಿವಾಸಿಯಾಗಿರುವ ಈತ ಐಎಸ್‌ಜೆಕೆಗೆ ಸೇರಿದವನು ಎಂದು ಪೊಲೀಸರು ತಿಳಿಸಿದ್ದಾರೆ.





