ದೇಶದ ವಿವಿಧೆಡೆ ಕ್ರಿಸ್ಮಸ್ ಕಾರ್ಯಕ್ರಮಗಳಿಗೆ ಸಂಘ ಪರಿವಾರದಿಂದ ಅಡ್ಡಿ

ಹೊಸದಿಲ್ಲಿ, ಡಿ. 26: ಕ್ರಿಸ್ಮಸ್ ಆಚರಣೆ ಸಂದರ್ಭ ಸಂಘ ಪರಿವಾರದ ಕಾರ್ಯಕರ್ತರು ಅಡ್ಡಿ ಉಂಟು ಮಾಡಿದ ಘಟನೆಗಳು ದೇಶದ ಹಲವು ಭಾಗಗಳಲ್ಲಿ ನಡೆದಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆಗ್ರಾದಲ್ಲಿ ಸಾಂತಾ ಕಾ್ಲಸ್ ಪ್ರತಿಕೃತಿಗೆ ಬೆಂಕಿ: ಕ್ರೈಸ್ತ ಮಿಷಿನರಿಗಳು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಸಾಂತಾ ಕ್ಲಾಸ್ ಮೂಲಕ ಉಡುಗೊರೆಗಳನ್ನು ವಿತರಿಸುವ ಮೂಲಕ ಹಿಂದೂ ಧರ್ಮದ ಬಡವರು ಮತ್ತು ಮಕ್ಕಳನ್ನು ಸೆಳೆಯಲು ಈ ಹಬ್ಬವನ್ನು ಬಳಸಿಕೊಳ್ಳುತ್ತಿವೆ ಎಂದು ಆಪಾದಿಸಿ ಸಾಂತಾ ಕ್ಲಾಸ್ ಪ್ರತಿಕೃತಿಯನ್ನು ಸುಟ್ಟುಹಾಕಿರುವ ಘಟನೆ ಉತ್ತರಪರದೇಶದ ಆಗ್ರಾದಲ್ಲಿ ಶನಿವಾರ ನಡೆದಿದೆ.
ಅಂತರ್ ರಾಷ್ಟ್ರೀಯ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು, ಎಂಜಿ ರಸ್ತೆಯ ಸಂತ ಜಾನ್ಸ್ ಕಾಲೇಜು ಮತ್ತು ನಗರದ ವಿವಿಧ ಶಾಲೆಗಳ ಆವರಣದಲ್ಲಿ ಫಾದರ್ ಕ್ರಿಸ್ಮಸ್ ಅಥವಾ ಸಂತ ನಿಕೋಲಸ್ ನ ಪ್ರತಿಕೃತಿಯನ್ನು ಸುಟ್ಟು ಹಾಕಿದರು.
ವಾರಣಾಸಿಯಲ್ಲಿ ಪ್ರತಿಭಟನೆ: ಉತ್ತರಪ್ರದೇಶದ ವಾರಣಾಸಿ ಜಿಲ್ಲೆಯ ಚಾಂದ್ಮಾರಿಯಲ್ಲಿರುವ ಮಾತ್ರಿಧಾಮ್ ಆಶ್ರಮದಲ್ಲಿ ಕ್ರಿಸ್ಮಸ್ ಕಾರ್ಯಕ್ರಮ ನಡೆಯುವುದಕ್ಕಿಂತ ಮುನ್ನ ಸಂಘ ಪರಿವಾರದ ಕಾರ್ಯಕರ್ತರು ಕೇಸರಿ ಪತಾಕೆ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಸುಮಾರು 20ರಿಂದ 30 ಜನರಿದ್ದ ಗುಂಪು ‘ಜೈ ಶ್ರೀರಾಮ್’ ಹಾಗೂ ‘ಮತಾಂತರ ನಿಲ್ಲಿಸಿ’ ಘೋಷಣೆಗಳನ್ನು ಕೂಗಿತು. ಈ ಘಟನೆಯಿಂದಾಗಿ ಅರ್ಧ ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಯಿತು.
ಅವರು ‘ಮಿಷನರಿ ಮುರ್ದಾಬಾದ್’ ಘೋಷಣೆಗಳನ್ನು ಕೂಗಿದರು ಎಂದು ದಲಿತ ಹಕ್ಕುಗಳ ಹೋರಾಟಗಾರ ಡಾ. ಅನೂಪ್ ಶರ್ಮಿಕ್ ತಿಳಿಸಿದ್ದಾರೆ. ‘‘ಇದು ಚರ್ಚ್ ಕೂಡ ಅಲ್ಲ. ಇದು ಆಶ್ರಮ. ಇಲ್ಲಿಗೆ ಎಲ್ಲ ನಂಬಿಕೆಯ, ಜಾತಿಯ, ಜನಾಂಗದ ಜನರು ಆಗಮಿಸುತ್ತಾರೆ, ಪ್ರಾರ್ಥಿಸುತ್ತಾರೆ ಹಾಗೂ ಶಾಂತಿ ಪಡೆಯುತ್ತಾರೆ’’ ಎಂದು ಮಾತ್ರಿಧಾಮ್ ಆಶ್ರಮದ ಪಾದ್ರಿ ಆನಂದ್ ತಿಳಿಸಿದ್ದಾರೆ.
ಹರ್ಯಾಣದಲ್ಲಿ ವಿದ್ಯಾರ್ಥಿಗಳಿಗೆ ಸಂತಾಕ್ಲಾಸ್ ಉಡುಪು ಹಾಕಿದರೆ ಪ್ರಕರಣ ದಾಖಲಿಸುವ ಬೆದರಿಕೆ: ಸಾಂತಾ ಕ್ಲಾಸ್ ಬಳಸಿ ಮತಾಂತರ ಮಾಡುವ ಬಗ್ಗೆ ಹರೀಶ್ ರಾಮ್ಕಲಿ ನೇತೃತ್ವದ ಹರ್ಯಾಣದ ಬಜರಂಗ ದಳ ಆಕ್ರೋಶ ವ್ಯಕ್ತಪಡಿಸಿದೆ. ರಾಮ್ಕಲಿ ಡಿಸೆಂಬರ್ 23ರಂದು ತನ್ನ ಫೇಸ್ಬುಕ್ ನಲ್ಲಿ ಫೋಟೊವೊಂದನ್ನು ಪೋಸ್ಟ್ ಮಾಡಿ ಯಾವುದೇ ಶಾಲೆ ಕುಟುಂಬದ ಅನುಮತಿ ಇಲ್ಲದೆ ಮಕ್ಕಳಿಗೆ ಸಾಂತ ಕ್ಲಾಸ್ನ ಉಡುಪು ಹಾಕಿದರೆ ಪ್ರಕರಣ ದಾಖಲಿಸಲಾಗುವುದು ಹಾಗೂ ಸಂಸ್ಥೆಯನ್ನು ಮುಚ್ಚಲಾಗುವುದು ಎಂದು ಎಚ್ಚರಿಕೆ ನೀಡಿದ್ದ.
ಕುರುಕ್ಷೇತ್ರದಲ್ಲಿ ‘ಜೈಶ್ರೀರಾಮ್’ ಘೋಷಣೆ: ಕುರುಕ್ಷೇತ್ರದಲ್ಲಿ ಕ್ರಿಸ್ಮಸ್ ಆಚರಣೆಯ ಸಂದರ್ಭ ಸಂಘ ಪರಿವಾದ ಕಾರ್ಯಕರ್ತರು ಪ್ರವೇಶಿಸಿ ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದ್ದಾರೆ ಹಾಗೂ ಮೈಕ್ನಲ್ಲಿ ಹನುಮಾನ್ ಚಾಲಿಸ್ ಪಠಿಸಿದ್ದಾರೆ.
ಅಂಬಾಲದಲ್ಲಿ ಏಸು ಕ್ರಿಸ್ತನ ಪ್ರತಿಮೆ ಧ್ವಂಸ: ಹರ್ಯಾಣದ ಅಂಬಾಲದಲ್ಲಿರುವ ಬ್ರಿಟೀಷ್ ಕಾಲಘಟ್ಟದ ರಿಡೀಮರ್ ಚರ್ಚ್ನ ಏಸುಕ್ರಿಸ್ತನ ಪ್ರತಿಮೆಯನ್ನು ರವಿವಾರ ಅಪರಾಹ್ನ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ. ಆದರೆ, ಆರೋಪಿಗಳನ್ನು ಇದುವರೆಗೆ ಗುರುತಿಸಲು ಸಾಧ್ಯವಾಗಿಲ್ಲ.
‘‘ಆರೋಪಿಗಳನ್ನು ಸೆರೆ ಹಿಡಿಯಲು ನಾವು ಮೂರು ತಂಡಗಳನ್ನು ನಿಯೋಜಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದೇವೆ. ಈ ಕೃತ್ಯದಲ್ಲಿ ಇಬ್ಬರು ವ್ಯಕ್ತಿಗಳು ಪಾಲ್ಗೊಂಡಿದ್ದಾರೆ. ವೀಡಿಯೊ ದೃಶ್ಯಾವಳಿಯ ಆಧಾರದಲ್ಲಿ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆ ಇದೆ’’ ಅವರು ಹೇಳಿದ್ದಾರೆ.
ಅಸ್ಸಾಂನಲ್ಲಿ ಚರ್ಚ್ ಪ್ರವೇಶಿಸಿ ಅಡ್ಡಿ: ಅಸ್ಸಾಂನ ಸಿಲ್ಚಾರ್ನಲ್ಲಿರುವ ಚರ್ಚ್ ನಲ್ಲಿ ಶನಿವಾರ ಕ್ರಿಸ್ಮಸ್ ಆಚರಣೆ ನಡೆಯುತ್ತಿದ್ದ ಸಂದರ್ಭ ಭಜರಂಗದ ದಳದ ಕಾರ್ಯಕರ್ತರೆಂದು ಹೇಳಲಾದ ದುಷ್ಕರ್ಮಿಗಳ ಗುಂಪೊಂದು ಪ್ರವೇಶಿಸಿ ದಾಂಧಲೆ ನಡೆಸಿದೆ. ಕ್ರೈಸ್ತರು ಕ್ರಿಸ್ಮಸ್ ಆಚರಿಸುವ ಬಗ್ಗೆ ನಮಗೆ ಯಾವುದೇ ವಿರೋಧ ಇಲ್ಲ. ಆದರೆ, ಹಿಂದೂಗಳಿಗೆ ಕ್ರಿಸ್ಮಸ್ ಆಚರಿಸಲು ಅವಕಾಶ ನೀಡುವುದಿಲ್ಲ ಎಂದು ಘೋಷಿಸಿ. ಯಾಕೆಂದರೆ ಡಿಸೆಂಬರ್ 25 ‘ತುಳಸಿ ದಿವಸ್’ ಎಂದು ದಾಳಿಕೋರರು ಹೇಳಿದ್ದಾರೆ. ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ. ಆದುದರಿಂದ ಪ್ರಕರಣ ದಾಖಲಿಸಿಲ್ಲ. ಇದು ಸಣ್ಣ ಗಲಾಟೆ. ಸ್ವಯಂಪ್ರೇರಿತ ಪ್ರಕರಣ ದಾಖಲಿಸುವ ಅಗತ್ಯ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ ಎಂದು ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.







