ಚಿಕ್ಕಮಗಳೂರು ನಗರಸಭೆ ಚುನಾವಣೆ: ಡಿ.27ರಂದು 110 ಮತಗಟ್ಟೆಗಳಲ್ಲಿ ಮತದಾನ
ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಚಿಕ್ಕಮಗಳೂರು, ಡಿ.26: ಇಲ್ಲಿನ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿ.27ರಂದು ಸೋಮವಾರ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಮತಯಂತ್ರದಲ್ಲಿ ಭದ್ರಪಡಿಸಲಿದ್ದಾರೆ.
ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಸಾಮಾನ್ಯ ಮತಗಟ್ಟೆ 66, ಆಕ್ಸಿಲರಿ ಮತಗಟ್ಟೆ 2, ಸೂಕ್ಷ್ಮ ಮತಗಟ್ಟೆ 29, ಅತಿ ಸೂಕ್ಷ್ಮ ಮತಗಟ್ಟೆ 13 ಸೇರಿದಂತೆ 110 ಮತ ಗಟ್ಟೆಗಳನ್ನು ತೆರೆಯಲಾಗಿದ್ದು, ಮತದಾನ ಪ್ರಕ್ರಿಯೆ ಬೆಳಿಗ್ಗೆ 7ಗಂಟೆಯಿಂದ ಸಂಜೆ 5 ಗಂಟೆಯವರೆಗೂ ನಡೆಯಲಿದೆ.
ಪ್ರತೀ ಮತಗಟ್ಟೆಗೆ ಅಧಿಕಾರಿ, ಸಿಬ್ಬಂದಿ ಸೇರಿ 4 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಪಿಆರ್‍ಓ, ಎಪಿಆರ್‍ಓ, ಪಿಓಸಿ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಪ್ರತೀ ಮತಗಟ್ಟೆಗೆ ನಿಯೋಜಿಸಲಾಗಿದೆ. ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 250 ಪೊಲೀಸ್ ಸಿಬ್ಬಂದಿ, ಪಿಆರ್‍ಓ 110, ಎಪಿಆರ್‍ಓ 110, ಮತಗಟ್ಟೆ ಅಧಿಕಾರಿಗಳು 220 ಸೇರಿದಂತೆ 700 ಮಂದಿ ಅಧಿಕಾರಿ, ಸಿಬ್ಬಂದಿಯನ್ನು ಮತಗಟ್ಟೆ ಕೇಂದ್ರಗಳಿಗೆ ನಿಯೋಜಿಸಲಾಗಿದೆ.
ಅತೀ ಸೂಕ್ಷ್ಮಮತಗಟ್ಟೆಗಳಿಗೆ ಹೆಚ್ಚುವರಿ ಸಿಬ್ಬಂದಿನ್ನು ನಿಯೋಜಿಸಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮತಗಟ್ಟೆಯ ಸುತ್ತ 200ಮೀ. ವ್ಯಾಪ್ತಿಯಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮತಗಟ್ಟೆಯೊಳಗೆ ಮತದಾರ, ಮತಗಟ್ಟೆ ಸಿಬ್ಬಂದಿ, ಮತಗಟ್ಟೆ ಏಜೆಂಟ್‍ಗಳಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಉಳಿದಂತೆ ಯಾರೇ ಮತಗಟ್ಟೆಯೊಳಗೆ ಪ್ರವೇಶ ಪಡೆಯಲು ಗುರುತಿನ ಚೀಟಿ ಹೊಂದಿರಬೇಕು. ಇಲ್ಲವೇ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದಿರಬೇಕು. ಮತಗಟ್ಟೆಗಳಲ್ಲಿ ಮತದಾರ, ಮತಗಟ್ಟೆ ಏಜೆಂಟ್, ಮತಗಟ್ಟೆ ಸಿಬ್ಬಂದಿ ಮೊಬೈಲ್, ನೀರಿನಬಾಟಲ್ ಲಿಕ್ವಿಡ್ ಮತ್ತು ಇತರ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಮತಗಟ್ಟೆ ಮುಂದೆ ಜನ ಸೇರಿಸುವುದು, ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದ್ದು, ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಚುನಾವಣಾಧಿಕಾರಿಗಳ ತಂಡ ಕ್ರಮಕ್ಕೆ ಮುಂದಾಗಲಿದೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇವಿಎಂ ಯಂತ್ರಗಳ ಪರಿಶೀಲನೆ ನಡೆಸಲಾಗಿದ್ದು, ಮತಗಟ್ಟೆಗಳಿಗೆ ನೀಡಿದ ಇವಿಎಂ ಹೊರತುಪಡಿಸಿ 35 ಇವಿಎಂ ಯಂತ್ರಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ. ಒಂದು ವೇಳೆ ತಾಂತ್ರಿಕ ಸಮಸ್ಯೆ ಉಂಟಾದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿ ಗಮನಕ್ಕೆ ತಂದಲ್ಲಿ ತಕ್ಷಣ ಪೂರೈಕೆ ಮಾಡಲು ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಚುನಾವಣಾ ಪ್ರಕ್ರಿಯೆಗೆ 48 ವಾಹನಗಳನ್ನು ಮಾಡಿಕೊಳ್ಳಲಾಗಿದೆ. ಇದರಲ್ಲಿ 2 ಕೆಎಸ್ಸಾರ್ಟಿಸಿ ಹೊರತುಪಡಿಸಿ ಉಳಿದಂತೆ ಜೀಪ್‍ಗಳನ್ನು ಕರ್ತವ್ಯಗೆ ನಿಗದಿ ಮಾಡಲಾಗಿದೆ.
ಮತಗಟ್ಟೆಗಳಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಚುನಾವಣಾ ಪರಿಕರಗಳೊಂದಿಗೆ ರವಿವಾರ ಮತಗಟ್ಟೆಗಳಿಗೆ ತೆರಳಿದ್ದು, ನಗರದ ಐಡಿಎಸ್‍ಜಿ ಕಾಲೇಜು ಆವರಣದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಮಸ್ಟರಿಂಗ್ ಕಾರ್ಯ ನಡೆಸಲಾಯಿತು. ಈ ವೇಳೆ ಇವಿಎಂ ಯಂತ್ರ, ಮತದಾರರ ಪಟ್ಟಿ, ಶಾಹಿ ಸೇರಿದಂತೆ ಇತರ ಪರಿಕರಗಳನ್ನು ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಯಿತು. ನಗರಸಭೆ ಚುನಾವಣೆ ಮಸ್ಟರಿಂಗ್ ಕಾರ್ಯದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ಉಪವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜ್, ತಹಶೀಲ್ದಾರ್ ಡಾ.ಕೆ.ಜೆ.ಕಾಂತರಾಜ್ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ನಗರಸಭೆಯ 35ವಾರ್ಡ್‍ಗಳಿಗೆ ಚುನಾವಣೆ ನಡೆಯುತ್ತಿದ್ದು, 110 ಮತಗಟ್ಟೆಗಳನ್ನು ತೆರೆಯಲಾಗಿದೆ. ರವಿವಾರ ಮಸ್ಟರಿಂಗ್ ಕಾರ್ಯ ನಡೆದಿದ್ದು, ಪ್ರತೀ ಮತಗಟ್ಟೆಗೆ 4ಜನ ಸಿಬ್ಬಂ ದಿಯನ್ನು ನಿಯೋಜಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಪ್ರತೀ ಮತಗಟ್ಟೆಗೆ ಇಬ್ಬರು ಪೊ ಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅತೀ ಸೂಕ್ಷ್ಮ 13, ಸೂಕ್ಷ್ಮ ಮತಗಟ್ಟೆಗಳು 29 ಇದ್ದು ಈ ಮತಗಟ್ಟೆಗಳಿಗೆ ವಿಶೇಷವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನೇಮ ಕ ಮಾಡಲಾಗಿದೆ. ಚುನಾವಣಾ ಕರ್ತವ್ಯದಲ್ಲಿ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ 750 ಜನ ಸಿಬ್ಬಂದಿ ಭಾಗವಹಿಸಲಿದ್ದಾರೆ.'
- ಡಾ.ಎಚ್.ಎಲ್.ನಾಗರಾಜ್, ಉಪವಿಭಾಗಾಧಿಕಾರಿ.
ನಗರಸಭೆ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿ ಚುನಾವಣಾ ಪರಿಕರಗಳನ್ನು ಹಂಚಿಕೆ ಮಾಡ ಲಾಗಿದೆ. ಕೇಲವು ವಾರ್ಡ್‍ಗಳಲ್ಲಿ ದೂರುಗಳು ಕೇಳಿಬಂದ ವಾರ್ಡ್‍ಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿದ್ದೇನೆ. ಎಂಸಿಸಿ ತಂಡಗಳು ವಾರ್ಡ್‍ಗಳಲ್ಲಿ ಗಸ್ತು ನಡೆಸುತ್ತಿದ್ದಾರೆ. ಶಾಂತಿಯುತ ಮತದಾನಕ್ಕೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.'
- ಕೆ.ಎನ್.ರಮೇಶ್, ಜಿಲ್ಲಾಧಿಕಾರಿ.







