ಎನ್‌ಇಪಿ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನ: 150ಕ್ಕೂ ಹೆಚ್ಚು ವಿದ್ಯಾರ್ಥಿಗಳು,ಶಿಕ್ಷಕರು ಭಾಗಿ
ನೀತಿಯನ್ನು ಹಿಂದೆಗೆದುಕೊಳ್ಳಲು ಆಗ್ರಹ

ಹೊಸದಿಲ್ಲಿ,ಡಿ.25: ಇಲ್ಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಶುಕ್ರವಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ವಿರುದ್ಧ 50 ದಿನಗಳ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳು,ಶಿಕ್ಷಕರು ಮತ್ತು ಸಾರ್ವಜನಿಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.
ಪ್ರಸ್ತಾವಿತ ಎನ್‌ಇಪಿಯು ಹೇಗೆ ವೆಚ್ಚ ಕಡಿತ,ಶೋಷಿತರಿಗೆ ಮೀಸಲಾತಿ ರದ್ದು,ಶುಲ್ಕ ಏರಿಕೆ ಮತ್ತು ಉನ್ನತ ಶಿಕ್ಷಣದಲ್ಲಿ ಇನ್ನಷ್ಟು ಗುತ್ತಿಗೆಗಳು ಮತ್ತು ಖಾಸಗೀಕರಣಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಸಮಾವೇಶವು ಒತ್ತಿ ಹೇಳಿತು. ನೀತಿಯು ಕೈಗೆಟಕುವ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸಾರ್ವಜನಿಕ ಶಿಕ್ಷಣದ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಇದು ಉನ್ನತ ಶಿಕ್ಷಣದಿಂದ ಕೆಳ ಮತ್ತು ಮಧ್ಯಮ ವರ್ಗಗಳನ್ನು ಹೊರಗಿಡಲು ಕಾರಣವಾಗುತ್ತದೆ ಎಂದು ಭಾಷಣಕಾರರು ಬೆಟ್ಟು ಮಾಡಿದರು.
ಶಿಕ್ಷಣದ ಕೇಸರೀಕರಣ ವಿಷಯಕ್ಕೆ ಹೆಚ್ಚಿನ ಒತ್ತು ನೀಡಿದ ಲೇಖಕ ಹಾಗೂ ಇತಿಹಾಸಕಾರ ಸೈಯದ್ ಇರ್ಫಾನ್ ಹಬೀಬ್ ಅವರು, ಎನ್‌ಇಪಿಯನ್ನು ಹಿಂದೆಗೆದುಕೊಳ್ಳುವಂತೆ ಮಾಡಲು ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯಂತಹ ಪ್ರಬಲ ಆಂದೋಲನವು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಎನ್‌ಇಪಿಯನ್ನು ಮ್ಯೂಚ್ಯುವಲ್ ಫಂಡ್‌ಗಳ ಜಾಹೀರಾತುಗಳಲ್ಲಿಯ ಅಪಾಯಗಳ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಹಕ್ಕು ನಿರಾಕರಣೆ ಪರಿಚ್ಛೇದಕ್ಕೆ ಹೋಲಿಸಿದ ಸಂಸದ ಮನೋಜ್ ಝಾ ಅವರು, ಈ ಕರಡು (ಎನ್‌ಇಪಿ) ನಿಮ್ಮ ಕೃಷಿ ಮಸೂದೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಬೀದಿ ಪ್ರತಿಭಟನೆಗಳು ಮತ್ತು ಜನಾಂದೋಲನಗಳಿಗೆ ಹೆದರುತ್ತಿದ್ದಾರೆ ಎಂದು ಹೇಳಿದರು.
ಯಾವುದೇ ಚರ್ಚೆಯಿಲ್ಲದೆ ಎನ್‌ಇಪಿಯನ್ನು ನಿಧಾನವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ದಿಲ್ಲಿ ವಿವಿಯ ಹಿಂದು ಕಾಲೇಜಿನ ಹಿರಿಯ ಪ್ರೊಫೆಸರ್ ರತನ್‌ಲಾಲ ಅವರು,ಎನ್‌ಇಪಿಯು ಸಂವಿಧಾನವು ಖಾತರಿ ನೀಡಿರುವ ಸಾಮಾಜಿಕ ನ್ಯಾಯ ನೀತಿಗಳ ಮೇಲೆ ದಾಳಿ ನಡೆಸುತ್ತಿದೆ. ಅಬ್ಬರದ ಪದಗುಚ್ಛಗಳೊಂದಿಗೆ ಶಿಕ್ಷಣವನ್ನು ಅಣಕಿಸುತ್ತಿದೆ ಎಂದರು.
ಇಡೀ ಎನ್‌ಇಪಿ ದಾಖಲೆಯಲ್ಲಿ ಎಲ್ಲಿಯೂ ಮೀಸಲಾತಿಯ ಉಲ್ಲೇಖವಿಲ್ಲ ಎಂದು ಅವರು ಬೆಟ್ಟು ಮಾಡಿದರೆ, ಎನ್‌ಇಪಿಯು ಕೇವಲ ಶಬ್ದಾಡಂಬರಗಳಿಂದ ಕೂಡಿದೆ ಎಂದು ದಿಲ್ಲಿ ವಿವಿ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷೆ ನಂದಿತಾ ನಾರಾಯಣ ಹೇಳಿದರು.
ಉನ್ನತ ಶಿಕ್ಷಣದೊಂದಿಗೆ ಯಾವುದೇ ಸಂಬಂಧವಿಲ್ಲದವರು ಎನ್‌ಇಪಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಮತ್ತು ಅದರ ಟೀಕಾಕಾರರಲ್ಲಿ ಶಿಕ್ಷಣಕ್ಕಾಗಿ ಹೋರಾಟಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಶಿಕ್ಷಣ ತಜ್ಞರು ಮತ್ತು ವಿದ್ವಾಂಸರು ಸೇರಿದ್ದಾರೆ ಎಂದು ಸುದ್ದಿ ಜಾಲತಾಣ ‘ದಿ ವೈರ್’ನ ಪತ್ರಕರ್ತ ಅಜಯ್ ಆಶೀರ್ವಾದ ಮಹಾಪ್ರಶಸ್ತ ಹೇಳಿದರು.







