ಚಂಡೀಗಢ ಮುನಿಸಿಪಲ್ ಚುನಾವಣೆ : 14 ವಾರ್ಡುಗಳಲ್ಲಿ ಆಪ್‍ಗೆ ಜಯಭೇರಿ, ಭಾರೀ ಕುಸಿತ ಕಂಡ ಬಿಜೆಪಿ !

ಚಂಡಿಗಡ,ಡಿ.27: ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಶುಕ್ರವಾರ ನಡೆದಿದ್ದ ಚಂಡಿಗಡ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶಗಳು ಸೋಮವಾರ ಪ್ರಕಟಗೊಂಡಿದ್ದು,ಅರವಿಂದ ಕೇಜ್ರಿವಾಲ್ ಅವರ ಆಪ್ ಮೊದಲ ಪ್ರಯತ್ನದಲ್ಲಿಯೇ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಬಿಜೆಪಿಯನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ.
35 ಸ್ಥಾನಗಳ ಪೈಕಿ ಆಪ್ 14 ಸ್ಥಾನಗಳನ್ನು ಗೆದ್ದಿದ್ದರೆ,ಬಿಜೆಪಿ 12,ಕಾಂಗ್ರೆಸ್ 8 ಸ್ಥಾನಗಳನ್ನು ಗಳಿಸಿವೆ. ಅಕಾಲಿ ದಳವು ತನ್ನ ಹಿಂದಿನ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ‘ಚಂಡಿಗಡ ಮನಪಾ ಚುನಾವಣೆಯಲ್ಲಿ ಆಪ್ನ ವಿಜಯವು ಪಂಜಾಬಿನಲ್ಲಿ ಬದಲಾವಣೆಯು ಸನ್ನಿಹಿತವಾಗಿರುವುದನ್ನು ಸೂಚಿಸಿದೆ. ಜನರು ಭ್ರಷ್ಟ ರಾಜಕೀಯವನ್ನು ತಿರಸ್ಕರಿಸಿದ್ದಾರೆ ಮತ್ತು ಆಪ್ ಅನ್ನು ಆಯ್ಕೆ ಮಾಡಿದ್ದಾರೆ. ಪಂಜಾಬ್ ಬದಲಾವಣೆಗೆ ಸಜ್ಜಾಗಿದೆ’ ಎಂದು ಪಂಜಾಬ್ ವಿಧಾನಸಭಾ ಚುನಾವಣೆಗಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಟ್ವೀಟಿಸಿದ್ದಾರೆ.
ಬಿಜಿಪಿಯ ಮೇಯರ್ ರವಿಕಾಂತ್ ಶರ್ಮಾ ಮತ್ತು ಮಾಜಿ ಮೇಯರ್ ದವೇಶ್ ಮೌದ್ಗಿಲ್ ಅವರು ಆಪ್ ಅಭ್ಯರ್ಥಿಗಳಿಂದ ಪರಾಭವಗೊಂಡಿರುವುದು ಪಕ್ಷಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ. ಆಪ್‌ನ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥ ಚಂದ್ರಮುಖಿ ಶರ್ಮಾ ಅವರೂ ಸೋಲನ್ನುಂಡಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಚಂಡಿಗಡ ಮನಪಾ 26 ಸ್ಥಾನಗಳನ್ನು ಹೊಂದಿತ್ತು. ಈ ಸಲ ಕೆಲವು ಗ್ರಾಮಗಳನ್ನು ಗ್ರಾಮ ಪಂಚಾಯತ್‌ನಿಂದ ಮನಪಾ ವ್ಯಾಪ್ತಿಗೆ ಸೇರಿಸಲಾಗಿತ್ತು.
ಚಂಡಿಗಡ ಮನಪಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ವಿರೋಧಿಗಳಾಗಿದ್ದವು. ಆಪ್‌ನ ಪ್ರವೇಶ ಅದನ್ನು ಬದಲಿಸಿದೆ. ಕೆಲವೇ ವಾರಗಳಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆ ಈಗ ಆಪ್,ಬಿಜೆಪಿ,ಕಾಂಗ್ರೆಸ್ ಮತ್ತು ಅಕಾಲಿ ದಳ-ಬಿಎಸ್‌ಪಿ ಮೈತ್ರಿಕೂಟದ ನಡುವಿನ ಚತುಷ್ಕೋನ ಸ್ಪರ್ಧೆಯ ಕಣವಾಗಲಿದೆ.







