ಮೇಕೇರಿ ಒಂಟಿ ಮಹಿಳೆ ಕೊಲೆ ಪ್ರಕರಣ: ಆರೋಪಿಗಳು ದೋಷಮುಕ್ತ

ಮಡಿಕೇರಿ: ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದಲ್ಲಿ 2019 ರಲ್ಲಿ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧದ ಆರೋಪವನ್ನು ದೋಷಮುಕ್ತಗೊಳಿಸಿ ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮೊದಲ ಆರೋಪಿ ಸೋಮವಾರಪೇಟೆಯ ಅಬ್ಬೂರುಕಟ್ಟೆಯ ಲಿಖಿತ ಹಾಗೂ ಎರಡನೇ ಆರೋಪಿ ರವಿ ದೋಷಮುಕ್ತಗೊಂಡವರಾಗಿದ್ದಾರೆ. 2019 ಮಾರ್ಚ್ 30 ರಂದು ರಾತ್ರಿ ಮೇಕೇರಿಯ ಅವಿವಾಹಿತ ಮಹಿಳೆ ಉಷಾ ಎಂಬವರನ್ನು ಲಿಖಿತ ಹಾಗೂ ರವಿ ದಂಪತಿಗಳು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಉಷಾ ಮೇಕೇರಿಯ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಲಿಖಿತಾಳಿಗೆ ಉಷಾ ಚಿಕ್ಕಮ್ಮಳಾಗಿದ್ದ ಕಾರಣ ಚಿಕ್ಕಮ್ಮನನ್ನು ನೋಡಲೆಂದು ಲಿಖಿತಾ ಬಂದು ಹೋಗುತ್ತಿದ್ದಳು. ಅಲ್ಲದೆ ಖರ್ಚಿಗಾಗಿ ಹಣವನ್ನು ಕೂಡ ಪಡೆದುಕೊಳ್ಳುತ್ತಿದ್ದಳು ಎಂದು ಹೇಳಲಾಗಿದೆ. 2019 ಮಾರ್ಚ್ 30 ರಂದು ರಾತ್ರಿ ಲಿಖಿತಾ ಹಾಗೂ ರವಿ ದಂಪತಿ ಉಷಾ ಅವರ ಮನೆಗೆ ಬಂದಿದ್ದು, ಹಾಸಿಗೆಯಲ್ಲಿದ್ದ ಉಷಾ ಅವರನ್ನು ಲಿಖಿತಾ ದಿಂಬಿನಿಂದ ಉಸಿರುಗಟ್ಟಿಸಿದರೆ, ಪತಿ ರವಿ ಬಿದಿರಿನ ದೊಣ್ಣೆಯನ್ನು ಕುತ್ತಿಗೆಗೆ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆ. ನಂತರ ಉಷಾ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ಆರೋಪಿಸಲಾಗಿತ್ತು.
ಮಡಿಕೇರಿ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಭಾರತೀಯ ದಂಡ ಸಂಹಿತೆ ಕಲಂ 449, 302, 392, ರೆಡ್ ವಿತ್ 34 ರಡಿಯಲ್ಲಿ ದಾಖಲಾದ ಪ್ರಕರಣದ 1 ನೇ ಹಾಗೂ 2 ನೇ ಆರೋಪಿಯ ವಿರುದ್ಧದ ಆರೋಪವನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಆರೋಪಿಗಳ ಪರ ವಕೀಲ ಬಿ.ಡಿ.ಕಪೀಲ್ ಕುಮಾರ್ ಅವರು ವಕಾಲತ್ತು ವಹಿಸಿದ್ದರು.







