‘100 ಚಿತ್ರಕಲೆ ರಚನೆ’: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಬಾಲಕ ಫರ್ಹಾನ್ ಮುಹಮ್ಮದ್

ಬೆಂಗಳೂರು, ಡಿ.27: ಅತಿ ಕಡಿಮೆ ವಯಸ್ಸಿನಲ್ಲಿ ಕ್ಯಾನ್ವಸ್ ಮೇಲೆ 100 ಚಿತ್ರಕಲೆಗಳನ್ನು ರಚನೆ ಮಾಡುವ ಮೂಲಕ ಬೆಂಗಳೂರಿನ 7 ವರ್ಷದ ಬಾಲಕ ಫರ್ಹಾನ್ ಮುಹಮ್ಮದ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರಿದ್ದಾರೆ.
ನಗರದ ಬಿಲ್ಡರ್ ಮುಹಮ್ಮದ್ ಸಮದ್ ಹಾಗೂ ಡಾ.ಫಿಝಾ ಅವರ ಮಗನಾದ ಫರ್ಹಾನ್ ಮುಹಮ್ಮದ್ ಇಂದಿರಾನಗರದ ನೀವ್ ಅಕಾಡೆಮಿಯಲ್ಲಿ ಎರಡನೆ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಚಿತ್ರಕಲೆ ರಚನೆಯಲ್ಲಿ ದಾಖಲೆ ಬರೆದಿರುವ ಫರ್ಹಾನ್‌ಗೆ ದಿ ಯೂನಿಕೊ ವರ್ಲ್ಡ್ ರೆಕಾರ್ಡ್ ವತಿಯಿಂದಲೂ ಪ್ರಶಸ್ತಿಯನ್ನು ನೀಡಲಾಗಿದೆ.
ಫರ್ಹಾನ್ ಮುಹಮ್ಮದ್‌ಗೆ ಚಿಕ್ಕದಿಂನಿಂದಲೂ ಚಿತ್ರಕಲೆ ರಚನೆಯಲ್ಲಿ ಅತೀವ ಆಸಕ್ತಿಯಿದ್ದು, ಈಗಾಗಲೆ ‘ಸನ್‌ಸೆಟ್ ಇನ್ ಆಫ್ರಿಕಾ’, ‘ಏರಿಯಲ್ ವ್ಯೂ ಆಫ್ ಅಂಡಮಾನ್ಸ್’, ‘ಪಹಲ್‌ಗಾಮ್’ ಹಾಗೂ ‘ರಂಗ್-ಎ-ಕಾಶ್ಮೀರ್’ ಸೇರಿದಂತೆ ಹಲವಾರು ಗಮನಾರ್ಹವಾದ ಚಿತ್ರಕಲೆಗಳನ್ನು ರಚಿಸಿದ್ದಾನೆ ಎಂದು ಡಾ.ಫಿಝಾ ತಿಳಿಸಿದ್ದಾರೆ.
ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಶನಿವಾರ ಫರ್ಹಾನ್ ರಚನೆಯ 100 ಚಿತ್ರಕಲೆಗಳ ಪೈಕಿ 25 ಚಿತ್ರಕಲೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದರಲ್ಲಿ 10 ಚಿತ್ರಕಲೆಗಳ ಮಾರಾಟದಿಂದ ಬರುವ ಆದಾಯವನ್ನು ಫರ್ಹಾನ್ ಅವರ ಹಿರಿಯ ಸಹೋದರ ಉಮರ್(12 ವರ್ಷ) ಸರಕಾರಿ ಶಾಲಾ ಮಕ್ಕಳಿಗಾಗಿ ನೆರವು ನೀಡಲು ಆರಂಭಿಸಿರುವ ಅಭಿಯಾನಕ್ಕೆ ಬಳಸಿಕೊಳ್ಳಲಾಗುವುದು ಎಂದು ಮುಹಮ್ಮದ್ ಸಮದ್ ತಿಳಿಸಿದ್ದಾರೆ.








