ಪದವಿ ಪೂರ್ವ ಕಾಲೇಜುಗಳಲ್ಲಿ ಜ.1ರಿಂದ ಫೆ.7ರ ವರೆಗೆ ‘ಸೂರ್ಯ ನಮಸ್ಕಾರ'
ಉಪನ್ಯಾಸಕರಿಂದ ಆಕ್ಷೇಪ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು, ಡಿ. 27: ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ 2022ರ ಜ.1ರಿಂದ ಫೆ. 7ರವರೆಗೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿರುವುದು ಉಪನ್ಯಾಸಕರು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳಿಂದ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ (ಶೈಕ್ಷಣಿಕ) ಆರ್.ಕುಸುಮಾ ಅವರು 2021ರ ಡಿ.24ರಂದು ಸುತ್ತೋಲೆ ಹೊರಡಿಸಿದ್ದು, ‘ಸೂರ್ಯ ನಮಸ್ಕಾರ'ದೊಂದಿಗೆ 2022ರ ಜ.26ರಂದು ‘ಸಂಗೀತದೊಂದಿಗೆ ಸೂರ್ಯ ನಮಸ್ಕಾರ’ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಾಗೂ ಈ ಸೂರ್ಯ ನಮಸ್ಕಾರ ಕಾರ್ಯಕ್ರಮದ ಕ್ರೋಡೀಕೃತ ಮಾಹಿತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಶೈಕ್ಷಣಿಕ ಇಲಾಖೆಗೆ ಸಲ್ಲಿಸಲು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.
‘ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್' ಡಿ.9ರಂದು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಪತ್ರ ಬರೆದು 75ನೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಏರ್ಪಡಿಸಲು ಕೋರಿತ್ತು. ಅಲ್ಲದೆ, ದೇಶದ 30 ರಾಜ್ಯಗಳಲ್ಲಿ 30 ಸಾವಿರ ಸಂಸ್ಥೆಗಳ ಒಟ್ಟು 3 ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿ ಒಟ್ಟು 75 ಕೋಟಿ ‘ಸೂರ್ಯ ನಮಸ್ಕಾರ' ಮಾಡಿಸಲು ಫೆಡರೇಷನ್ ತೀರ್ಮಾನಿಸಿದೆ ಎಂದು ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಫೆಡರೇಷನ್ ಉಲ್ಲೇಖಿಸಿತ್ತು.
ಆ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಡಿ.20ಕ್ಕೆ ಕೇಂದ್ರ ಶಿಕ್ಷಣ ಸಚಿವಾಲಯ ಅಧೀನ ಕಾರ್ಯದರ್ಶಿ ರಾಜೇಶ್ ಕುಮಾರ್ ಮೌರ್ಯ ಅವರು ಪತ್ರ ಬರೆದು ‘ಸೂರ್ಯ ನಮಸ್ಕಾರ' ಕಾರ್ಯಕ್ರಮ ಏರ್ಪಡಿಸುವಂತೆ ನಿರ್ದೇಶನ ನೀಡಿದ್ದರು. ‘ಸೂರ್ಯ ನಮಸ್ಕಾರ'ವು ಯೋಗಾಸನದ 10 ಭಂಗಿಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳ ಆರೋಗ್ಯ ವೃದ್ದಿಗೆ ಹಾಗೂ ಮನೋಬಲ ಹೆಚ್ಚಿಸುವುದಕ್ಕೆ ನೆರವಾಗಲಿದೆ ಎಂದು ಫೆಡರೇಷನ್, ಕೇಂದ್ರ ಸರಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
'ಆದೇಶದ ಹಿಂದೆ ನಿರಂಕುಶ ಅಧಿಕಾರದ ಅಹಮಿಕೆಯಿದೆ'
ಪದವಿಪೂರ್ವ ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಕಡ್ಡಾಯಗೊಳಿಸುವ ಸರಕಾರದ ಆದೇಶದ ಹಿಂದಿನ ಮನಸ್ಥಿತಿಯೂ ಸೂರ್ಯ ನಮಸ್ಕಾರವೆಂದರೆ ಹಿಂದುತ್ವ. ಶಿಕ್ಷಣವೆಂದರೆ ಹಿಂದುತ್ವ. ಇಲ್ಲಿ ವೈಜ್ಞಾನಿಕ, ವೈಚಾರಿಕ ಪಠ್ಯಕ್ರಮವಿಲ್ಲ, ಸೂಕ್ತವಾದ ವ್ಯಾಸಂಗ ಕ್ರಮವಿಲ್ಲ, ಕಾಲೇಜುಗಳಲ್ಲಿ ಶಿಕ್ಷಕರಿಲ್ಲ. ದೈಹಿಕ ಶಿಕ್ಷಕರ ಕೊರತೆಯಿದೆ. ಅತಿಥಿ ಉಪನ್ಯಾಸಕರು ಬದುಕು ಅತಂತ್ರವಾಗಿದೆ. ಆದರೆ ಶಿಕ್ಷಣದ ಈ ಮೂಲಭೂತ ಅಗತ್ಯಗಳ ಕುರಿತು ಸರಕಾರಕ್ಕೆ ಆಸಕ್ತಿಯಿಲ್ಲ. ಸೂರ್ಯ ನಮಸ್ಕಾರ ಮೂಲಕ ಮತೀಯ ಅಜೆಂಡಾಗಳನ್ನು ಸಾಗಿಸಲು ಮುಂದಾಗಿದೆ. ಸರಕಾರಿ ಶಾಲೆ, ಕಾಲೇಜುಗಳನ್ನು ಬಲವರ್ಧನೆಗೊಳಿಸುವ ಯಾವುದೇ ಕಾರ್ಯಯೋಜನೆಗಳಿಲ್ಲದ ಬಿಜೆಪಿ ಅಗ್ಗದ ಜನಪ್ರಿಯತೆಗಾಗಿ ಈ ರೀತಿಯ ಅಡ್ಡ ಮಾರ್ಗ ಹಿಡಿದಿದೆ. ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸುವ ಆದೇಶದ ಹಿಂದೆ ನಿರಂಕುಶ ಅಧಿಕಾರದ ಅಹಮಿಕೆಯಿದೆ. ಇದನ್ನು ತಿರಸ್ಕರಿಸುವುದು ಪ್ರಜಾಪ್ರಭುತ್ವದ ಆಶಯವನ್ನು ಗೌರವಿಸಿದಂತೆ.
-ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರ
'ಅರ್ಥಪೂರ್ಣ ಆಚರಣೆಗೆ ಮುಂದಾಗಲಿ'
‘ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆಗಳನ್ನು ಹಲವು ವರ್ಷಗಳಿಂದ ಸರಕಾರ ಭರ್ತಿ ಮಾಡುತ್ತಿಲ್ಲ. ಹೀಗಾಗಿ ಮಕ್ಕಳಿಗೆ ಬೋಧನೆ ಹೊರತು ದೈಹಿಕ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಶಿಕ್ಷಣ ಇಲಾಖೆ ‘ಸೂರ್ಯ ನಮಸ್ಕಾರ' ಕಾರ್ಯಕ್ರಮ ಏರ್ಪಡಿಸಲು ಸುತ್ತೋಲೆ ಹೊರಡಿಸಿರುವುದು ಸರಿಯಲ್ಲ. ಸಾಂಕೇತಿಕವಾಗಿ ಸೂರ್ಯ ನಮಸ್ಕಾರ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ನಿಜಕ್ಕೂ ಸರಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಚರ್ಚೆ, ಸಂವಾದ, ಉಪನ್ಯಾಸಗಳನ್ನು ಏರ್ಪಡಿಸುವ ಮೂಲಕ ಅರ್ಥಪೂರ್ಣ ಆಚರಣೆಗೆ ಮುಂದಾಗಬೇಕು'
-ಮುನಿವೆಂಕಟಪ್ಪ ರೆಡ್ಡಿ, ಉಪನ್ಯಾಸಕರು







