‘ತಲಕಾವೇರಿಯಲ್ಲಿ ನಾಟಕ ಮಾಡಿದವರು ರೈತರ ಮಕ್ಕಳಾ?’: ಡಿ.ಕೆ.ಶಿ ವಿರುದ್ಧ ಎಚ್.ಡಿ.ಕೆ ಪರೋಕ್ಷ ವಾಗ್ದಾಳಿ

ಎಚ್.ಡಿ.ಕುಮಾರಸ್ವಾಮಿ (File Photo)
ಬಿಡದಿ, ಡಿ.27: ಪಂಚೆ ಕಟ್ಟಿದವರು ರೈತರು ಅಲ್ಲ ಎಂದಾದ ಮೇಲೆ ಪವಿತ್ರವಾದ ಕಾವೇರಿ ತಾಯಿ ಮುಂದೆ ನಿಂತು ನಾಟಕ ಮಾಡುವವರನ್ನು ಮಣ್ಣಿನ ಮಕ್ಕಳು ಎಂದು ಕರೆಯಬೇಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರೋಕ್ಷ ತೀವ್ರ ಟೀಕಾಪ್ರಹಾರ ನಡೆಸಿದರು.
ಸೋಮವಾರ ಬಿಡದಿಯಲ್ಲಿ ಪುರಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾವೇನು ಮಣ್ಣಿನ ಮಕ್ಕಳು ಎಂದು ಎದೆ ಮೇಲೆ ಬೋರ್ಡ್ ಹಾಕಿಕೊಂಡಿಲ್ಲ. ನಮಗೆ ನಾಟಕ ಮಾಡಲು ಬರುವುದೂ ಇಲ್ಲ ಹಾಗೂ ಅದರ ಅಗತ್ಯ ನನಗಿಲ್ಲ ಎಂದರು.
ಎಲ್ಲಿಯೂ ಡಿ.ಕೆ.ಶಿವಕುಮಾರ್ ಹೆಸರು ಬಳಸದೇ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಈ ರಾಜ್ಯಕ್ಕೆ ಗೊತ್ತಿದೆ, ಕುಮಾರಸ್ವಾಮಿ ಕೊಡುಗೆ ಏನೆಂದು. ನೀರಾವರಿ ವಿಚಾರವಾಗಿ ದೇವೇಗೌಡರ ಕೊಡುಗೆ ಏನೆಂದು ಗೊತ್ತಿದೆ. ಮೊನ್ನೆ ಹಾಸನದಲ್ಲಿ ಅವರು ಹೇಳಿದ್ದಾರೆ, ಏನ್ ಪಂಚೆ ಹಾಕಿದವರೆಲ್ಲ ರೈತರ ಮಕ್ಕಳಾ? ನಾವು ಪಂಚೆ ಹಾಕಿದ್ದೇವೆ ನಾವು ರೈತರು ಎಂದಿದ್ದಾರೆ. ಅವರು ಆ ರೀತಿ ಹೇಳಿರುವುದು ರೈತರ ಕುರಿತ ಅವರ ಭಾವನೆಗಳೇನು ಎನ್ನುವುದು ಅರ್ಥವಾಗುತ್ತದೆ ಎಂದರು.
ರೈತರ ಮಕ್ಕಳು ಎಂದು ನಾವು ಎದೆ ಮೇಲೆ ಬೋರ್ಡ್ ಹಾಕಿಕೊಂಡಿಲ್ಲ. ಜನರೇ ಅವರವರ ಕೆಲಸ ನೋಡಿ ಬಿರುದು ಕೊಡುತ್ತಾರೆ. ಪಂಚೆ ಹಾಕಿಕೊಂಡು ಶೋ ಮಾಡಿದವರೆಲ್ಲ ರೈತರಾಗಲ್ಲ ಎಂದು ಅವರು ಹೇಳಿದರು.
ತಲಕಾವೇರಿಯಲ್ಲಿ ಏನೆಲ್ಲಾ ನಡೆಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಎಲ್ಲರನ್ನೂ ದೂರ ಕಳುಹಿಸಿ ಕಾವೇರಿ ನೀರಿಗೆ ಅಕ್ಷತೆ ಹಾಕೋದನ್ನು ಈ ರಾಜ್ಯದ ಜನ ಕಣ್ತುಂಬಿಕೊಂಡಿದ್ದಾರೆ. ಹಾಗೆಯೇ, ಮೆಟ್ಟಲಿಗೆ ನಮಸ್ಕಾರ ಮಾಡಿಕೊಂಡಿದನ್ನು ಕೂಡ ನೋಡಿದ್ದೇನೆ. ಅವರು ನರೇಂದ್ರ ಮೋದಿಯವರನ್ನು ಕಾಪಿ ಮಾಡಿದ್ದಾರೆ. ಇಂಥ ಆರ್ಟಿಫಿಷಿಯಲ್(ಕೃತಕ) ಹೋರಾಟಗಳು ನಡೆಯಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಹೋರಾಟ ನೋಡಿಲ್ವ ನಾವು. ಕೃಷ್ಣೆಯ ನೀರನ್ನು ಇವರು ಹೇಗೆ ಉಳಿಸಿದರು ಅನ್ನೋದನ್ನು ನೋಡಿದ್ದೇವೆ, ಐದು ವರ್ಷದಲ್ಲಿ. ಈಗ ಮೇಕೆದಾಟು ಹೋರಾಟ ಮಾಡ್ತಿದ್ದಾರೆ, ಪಾದಯಾತ್ರೆ ಮೂಲಕ ಮತಯಾತ್ರೆ ಮಾಡುತ್ತಿದ್ದಾರೆ. ಸ್ವಾಮೀಜಿಗಳನ್ನು ಪಾದಯಾತ್ರೆಗೆ ಕರೆಯುತ್ತಿದ್ದಾರೆ. ಶಕ್ತಿ ಇದ್ದರೆ ಹೋಗಿ ದಿಲ್ಲಿಯಲ್ಲಿ ಉಪವಾಸ ಕುಳಿತುಕೊಳ್ಳಿ. ಕೇಂದ್ರ ಸರಕಾರದ ಮುಂದೆ ಹೋರಾಟ ಮಾಡಿ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಜನರನ್ನು ಪರಿವರ್ತನೆ ಮಾಡುವ ಸಲುವಾಗಿ ಹೋರಾಟ ಮಾಡುತ್ತಿಲ್ಲ. ಇದು ಕೇವಲ ಮತಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ ಅಷ್ಟೇ. ಜನರನ್ನು ಯಾಮರಿಸಲು ಎಲ್ಲ್ಲ ಸಂದರ್ಭದಲ್ಲಿಯೂ ಆಗಲ್ಲ. ಅದಕ್ಕೆ ಮೂಲ ಉದ್ದೇಶ ಉತ್ತಮವಾಗಿ ಇರಬೇಕು ಎಂದು ಅವರು ವಾಗ್ದಾಳಿ ನಡೆಸಿದರು.







