ಕಲ್ಲು ಗಣಿಗಾರಿಕೆ, ಕ್ರಷರ್ ಗಳ ಬಗ್ಗೆ ತಿಂಗಳೊಳಗೆ ವರದಿ ನೀಡಲು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸೂಚನೆ

ಮಂಗಳೂರು, ಡಿ.27: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಸರಕಾರಿ ಜಾಗಗಳಲ್ಲಿ ನಡೆಯುತ್ತಿರುವ 58 ಕ್ವಾರಿಗಳನ್ನು ಪರಿಶೀಲಿಸಿ ಅವು ಕಾನೂನಾತ್ಮಕವಾಗಿ ನಡೆಯುತ್ತಿವೆಯೇ ಎಂಬ ಬಗ್ಗೆ ಒಂದು ತಿಂಗಳೊಳಗೆ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ಹಾಗೂ ಅನಧಿಕೃತ ಕ್ರಷರ್ ಘಟಕಗಳ ಕಾರ್ಯಾಚರಣೆಯನ್ನು ತಡೆಗಟ್ಟುವ ಕುರಿತು ಇಂದು ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಘಟಕಗಳು ನಿಯಮ ಉಲ್ಲಂಘಿಸಿದ್ದಲ್ಲಿ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗೆ ದೂರು ಸಲ್ಲಿಸಬೇಕು. ಪಟ್ಟಾ ಜಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಲ್ಲಿ ಹಿರಿಯ ಭೂವಿಜ್ಞಾನಿಗಳು ಪರಿಶೀಲಿಸಿ, ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಭೂದಾಖಲೆಗಳು ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ಡ್ರೋನ್ ಮೂಲಕ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಘಟಕಗಳ ಸಮಿಕ್ಷೆ ನಡೆಸಬೇಕು. ಪರವಾನಗಿ ಪಡೆದು, ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ನಡೆಸುತ್ತಿರುವವರು ಕಾನೂನು ಬದ್ಧವಾಗಿ ಹಾಗೂ ಆ ವ್ಯಾಪ್ತಿಯೊಳಗೆ ನಡೆಸುತ್ತಿರುವ ಬಗ್ಗೆ ಖಾತ್ರಿ ಪಡಿಸಬೇಕು.
ಜಿಲ್ಲೆಯಲ್ಲಿರುವ ಪ್ರಮುಖ ಕಟ್ಟಡಗಳು, ಶಾಲೆ, ಅಂಗನವಾಡಿ ಕೇಂದ್ರ, ಹಾಸ್ಟೆಲ್, ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಇತ್ಯಾದಿಗಳು ಹಾನಿಯಾಗದಂತೆ ಗಣಿಗಾರಿಕೆ ಹಾಗೂ ಕ್ರಷರ್ ಬ್ಲಾಸ್ಟಿಂಗ್ ವೇಳೆ ಗಮನ ಹರಿಸಬೇಕು. ಗಣಿಗಾರಿಕೆ ಕುರಿತು ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳ ಬಗ್ಗೆ ತಿಳಿದುಕೊಳ್ಳಬೇಕು, ಅಕ್ರಮವನ್ನು ಗುರುತಿಸಿ ನಿಲ್ಲಿಸಬೇಕು, ಕಾನೂನುಬದ್ಧವಾಗಿ ಮಾಡುತ್ತಿರುವವರು ವ್ಯಾಪ್ತಿಯೊಳಗೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ರಾಜಧನ ಸಂಗ್ರಹ ಬಗ್ಗೆ ವರದಿ ನೀಡಬೇಕು.
96 ಕಲ್ಲುಗಣಿಗಾರಿಕೆ ಹಾಗೂ 60 ಕ್ರಷರ್‌ಗಳಿಗೆ ನೀಡಲಾದ ಅನುಮತಿ ಪತ್ರಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳುಹಿಸಬೇಕು, ಅವರು ಅದನ್ನು ಪರಿಶೀಲಿಸಲಿದ್ದಾರೆ. ಇವುಗಳನ್ನು ಹೊರತು ಪಡಿಸಿ, ಉಳಿದವೆಲ್ಲವೂ ಅಕ್ರಮ ಎಂಬುದನ್ನು ಪ್ರಚಾರ ಮಾಡಬೇಕು. ಜಿಲ್ಲೆಯಲ್ಲಿ ಕೆಂಪು ಕಲ್ಲು ಅಥವಾ ಗ್ರಾನೈಟ್‌ನ ಅಕ್ರಮ ಗಣಿಗಾರಿಕೆ ಕಂಡು ಬಂದರೆ ಗ್ರಾಮಲೆಕ್ಕಿಗರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹಲವು ಸೂಚನೆ, ಸಲಹೆಗಳನ್ನು ಜಿಲ್ಲಾಧಿಕಾರಿ ಸಭೆಯಲ್ಲಿ ನೀಡಿದರು.
ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ್ ಗುಣಾರೆ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್ ಕುಮಾರ್ ವೇದಿಕೆಯಲ್ಲಿದ್ದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ನಿರಂಜನ್, ಕಲ್ಲುಗಣಿಗಾರಿಕೆ ಹಾಗೂ ಕ್ರಷರ್ ಸಂಘದ ಜಿಲ್ಲಾ ಅಧ್ಯಕ್ಷ ಮನೋಜ್ ಶೆಟ್ಟಿ ಸೇರಿದಂತೆ ವಿವಿಧ ಕಲ್ಲುಗಣಿಗಾರಿಕೆ ಹಾಗೂ ಕ್ರಷರ್‌ಗಳ ಮಾಲಕರು, ಪದಾಧಿಕಾರಿಗಳು ಸಭೆಯಲ್ಲಿದ್ದರು.







