ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ ಕಿತ್ತುಕೊಳ್ಳುವ ಕಾಯಿದೆ : ಭಾರತೀಯ ಕ್ರೈಸ್ತ ಒಕ್ಕೂಟ ಆರೋಪ
ಉಡುಪಿ, ಡಿ.27: ರಾಜ್ಯ ಸರಕಾರ ತರಲುದ್ದೇಶಿಸಿರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ’ ನಿಜವಾಗಿಯೂ ರಾಜ್ಯದ ಅಲ್ಪಸಂಖ್ಯಾತರಿಗೆ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರವನ್ನು ಕಿತ್ತು ಕೊಳ್ಳುವ ಕಾಯ್ದೆಯಾಗಿದೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಶಾಂತ್ ಜತ್ತನ್ನ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರವನ್ನು ಕಿತ್ತು ಕೊಳ್ಳುವ ಕಾಯ್ದೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈಗಾಗಲೇ ಸಂವಿಧಾನದ ಪ್ರಕಾರ ಧಾರ್ಮಿಕ ಸ್ವಾತಂತ್ರ ಎಂಬುದು ಎಲ್ಲಾ ಧರ್ಮದವರಿಗೂ ಏಕರೂಪದಲ್ಲಿದೆ. ಯಾರು ಬೇಕಾದರೂ ತಾನು ನಂಬಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಮತ್ತು ಅದನ್ನು ಪ್ರಚಾರ ಮಾಡ ಬಹುದು. ಆದರೆ ಈ ಕಾಯ್ದೆಯಿಂದ ಅಲ್ಪಸಂಖ್ಯಾತರು ತಮ್ಮ ಹಬ್ಬಗಳನ್ನು ಕೂಡಾ ಆಚರಿಸಲಾಗದ ಸ್ಥಿತಿ ಇದೆ ಎಂದು ದೂರಿದರು.
ಈ ಕಾಯ್ದೆ ಮೇಲ್ನೋಟಕ್ಕೆ ಮತಾಂತರವನ್ನು ದೊಡ್ಡ ಕ್ರಿಮಿನಲ್ ಅಪರಾಧ ಎಂಬಂತೆ ಬಿಂಬಿಸಿ ತಾನು ನಂಬಿದ್ದನ್ನು ಇತರರಿಗೆ ಹೇಳದಂತೆ ಭಯ ಹುಟ್ಟಿಸುವುದು, ಬಡವರಿಗೆ ಅಶಕ್ತರಿಗೆ ಸಹಾಯ ಅಥವಾ ಉಚಿತ ಶಿಕ್ಷಣ ಕೊಟ್ಟಲ್ಲಿ ಅದು ಮತಾಂತರ ಎಂದು ಬಿಂಬಿಸುವ ರೀತಿಯಲ್ಲಿದೆ ಎಂದರು.
ಮತಾಂತರ ಆದ ವ್ಯಕ್ತಿಯ ಬಗ್ಗೆ ದೂರು ನೀಡುವವರು ಆತನ ಸಹವತರ್ಚಿ ಅಥವಾ ಸಹೋದ್ಯೋಗಿ ಅಥವಾ ಬೇರೆ ಯಾರೂ ಕೂಡಾ ಆಗಿರಬಹುದು. ಇದರಿಂದ ಈ ಕಾಯ್ದೆ ದೂರುಪಯೋಗವಾಗಬಹುದಾಗಿದೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಅಲ್ಲದೇ ಈ ಕಾಯ್ದೆ ಕೆಲವೊಂದು ಸಂಘಟನೆಗಳಿಗೆ ದಾಳಿ ಮಾಡಲು ಕಾನೂನು ಕೈಗೆತ್ತಿಕೊಳ್ಳಲು ಲೈಸನ್ಸ್ ಕೊಟ್ಟಂತಿದೆ. ಹೀಗಾಗಿ ಈ ಕಾಯ್ದೆಯನ್ನು ನಾವು ವಿರೋಧಿಸುತಿದ್ದು, ತಕ್ಷಣ ವಾಪಾಸು ಪಡೆಯುವಂತೆ ಒತ್ತಾಯಿಸುತ್ತೇವೆ ಎಂದು ಪ್ರಶಾಂತ ಜತ್ತನ್ನ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರೈಸ್ತ ಸಂಘ ಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ನೇರಿ ಕರ್ನೇಲಿಯೊ, ಭಾರತೀಯ ಕ್ರೈಸ್ತ ಒಕ್ಕೂಟದ ಕಾನೂನು ಸಲಹೆಗಾರ ನೊಯೆಲ್ ಕರ್ಕಡ, ರಾಜ್ಯ ಸಂಚಾಲಕ ಗ್ಲಾಡ್ಸನ್ ಕರ್ಕಡ ಉಪಸ್ಥಿತರಿದ್ದರು.







