ಸೇವೆಯ ನೆಪದಲ್ಲಿ ಮಾಡುತ್ತಿರುವ ಮತಾಂತರದ ವಿರುದ್ಧ ಮಸೂದೆ : ಸಚಿವ ಸುನೀಲ್ ಕುಮಾರ್

ಉಡುಪಿ, ಡಿ.27: ರಾಜ್ಯ ಸರಕಾರ ತರುತ್ತಿರುವ ಮತಾಂತರ ನಿಷೇಧ ಕಾಯ್ದೆಯು ಸೇವೆಯ ನೆಪದಲ್ಲಿ ಮಾಡುತ್ತಿರುವ ಮತಾಂತರದ ವಿರುದ್ಧ ಇದೆ ಎಂದು ರಾಜ್ಯ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಯನ್ನು ಯಾರಾದರೂ ಯಾಕೆ ವಿರೋಧಿಸಬೇಕು, ಅಸೆ ಆಮಿಷ ಒಡ್ಡಿ ಮತಾಂತರ ಮಾಡುವವರ ಬಗ್ಗೆ ಮಾತ್ರ ಕಠಿಣ ಕ್ರಮ. ಮತಾಂತರ ಮಾಡುವುದಿಲ್ಲ ಎನ್ನುವವರಿಗೆ ಆತಂಕ ಯಾಕೆ ಎಂದು ಪ್ರಶ್ನಿಸಿದರು.
ಹಿಂದುಗಳು ಕ್ರಿಶ್ಚಿಯನ್ ಧರ್ಮಕ್ಕೆ ಹೋಗುತ್ತಾರೆ ಎಂದು ಈ ಕಾಯ್ದೆ ತರುತ್ತಿಲ್ಲ. ಯಾವುದೇ ಧರ್ಮಕ್ಕೆ ಸೆಳೆಯಲು ಯಾರೂ ಆಸೆ ಆಮಿಷ ಒಡ್ಡಬಾರದು. ಮತಾಂತರ ಆಗಬೇಕೆಂದರೆ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಕಾಯ್ದೆ ವಿರೋಧಿಸುವವರಲ್ಲಿ ಹಿಡನ್ ಅಜೆಂಡಾ, ದುರುದ್ದೇಶವಿದೆ ಎಂದವರು ಅಭಿಪ್ರಾಯಪಟ್ಟರು.
ಸುಗ್ರೀವಾಜ್ಞೆಗೆ ಚಿಂತನೆ: ಲವ್ ಜಿಹಾದ್ ಕುರಿತು ಮಾತನಾಡಿದ ಸಚಿವ ಸುನೀಲ್ ಕುಮಾರ್, ಈ ವಿಚಾರವನ್ನು ಕೂಡ ಮತಾಂತರ ಕಾಯ್ದೆಯಲ್ಲಿ ಸೇರಿಸಿದ್ದೇವೆ. ಮತಾಂತರವನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ಮದುವೆ ಆಗ ಬಾರದು. ವಿಧಾನ ಪರಿಷತ್ತಿನಲ್ಲಿ ಕಾಯ್ದೆಗೆ ಅನುಮೋದನೆ ಪಡೆಯಬೇಕು. ಅದಕ್ಕೂ ಮುನ್ನ ಸುಗ್ರೀವಾಜ್ಞೆ ತರುವ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ ಎಂದರು.
ಕ್ರೈಸ್ತ ಮಿಷನರಿಗಳನ್ನು ಉದ್ದೇಶವಾಗಿಟ್ಟುಕೊಂಡು ಮಾಡಿರುವ ಕಾನೂನು ಇದಲ್ಲ. ದೀನ ದಲಿತ ಹಿಂದುಳಿದವರ ಹಿತಕ್ಕಾಗಿ ಈ ಕಾನೂನು. ಕ್ರೈಸ್ತ ಮಿಷನರಿ ಗಳು ಇದನ್ನು ಮೈಮೇಲೆ ಎಳೆದುಕೊಳ್ಳುವುದು ಯಾಕೆ. ಕ್ರೈಸ್ತ ಮಿಷನರಿಗಳ ಸೇವೆಯ ಹಿಂದೆ ದುರುದ್ದೇಶವಿದೆಯಾ? ಎಂದವರು ಪ್ರಶ್ನಿಸಿದರು.
ಜನರ ಆರೋಗ್ಯದ ಹಿತದೃಷ್ಟಿ: ರಾಜ್ಯದಲ್ಲಿ 10 ದಿನ ನೈಟ್ ಕರ್ಫ್ಯೂ ಜಾರಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಜನರ ಆರೋಗ್ಯದ ಹಿತದೃಷ್ಟಿಯಿಂದ ನಿಯಮ ಜಾರಿ ಮಾಡಿದ್ದೇವೆ. ಹೊಸವರ್ಷ ಸಂದರ್ಭ ಜನರ ಅನಗತ್ಯ ಓಡಾಟ ತಪ್ಪಿಸಲು ಈ ಕ್ರಮ ಎಂದರು.
ನಿಯಮಗಳ ಮೂಲಕ ಸಾರ್ವಜನಿಕರನ್ನು ಎಚ್ಚರಿಸುತ್ತಿದ್ದೇವೆ. ನೈಟ್ ಕರ್ಫ್ಯೂ ಬಗ್ಗೆ ರಾಜ್ಯದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. ಡಿ.30ರಂದು ಈ ಕುರಿತು ಒಂದು ಸುದೀರ್ಘ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಜನರ ಆರೋಗ್ಯದ ರಕ್ಷಣೆ ಸರಕಾರದ ಮೊದಲ ಕರ್ತವ್ಯ ಎಂದರು.
ಕೊರೋನ ಜಾಸ್ತಿಯಾದರೆ ಸರ್ಕಾರವನ್ನು ದೂರುತ್ತಾರೆ. ಹೊಸ ವರ್ಷ ಆಚರಿಸಿ ಎಂದು ಸರಕಾರ ಹೇಳುವುದಿಲ್ಲ. ನಾನು ನನ್ನ ಜೀವನದಲ್ಲಿ ಹೊಸ ವರ್ಷ ಆಚರಿಸಿಲ್ಲ. ನಾನು ಹೊಸವರ್ಷ ಆಚರಿಸುವುದು ಯುಗಾದಿಗೆ. ಉಳಿದವರಿಗೆ ಇದನ್ನೇ ಮಾಡಿ ಅದನ್ನೇ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ಯುಗಾದಿಗೆ ಹೊಸವರ್ಷ ಆಚರಿಸುವುದು ನಮ್ಮ ಸಂಸ್ಕೃತಿ. ಹೊಸ ಆಚರಣೆಗೆ ಸರಕಾರ ಅಡ್ಡಿಪಡಿಸುವುದಿಲ್ಲ.ನಿಮ್ಮ ಹಿತಾಸಕ್ತಿಗೆ ಬಿಟ್ಟದ್ದು ಎಂದರು.







