ಪಂಚ ರಾಜ್ಯಗಳ ಚುನಾವಣೆ ಮುಂದೂಡಿಕೆ ಇಲ್ಲ: ವರದಿ

ಹೊಸದಿಲ್ಲಿ, ಡಿ. 27: ಮುಂದಿನ ವರ್ಷ ನಡೆಯಲಿರುವ ಪಂಚ ರಾಜ್ಯಗಳ ಚುನಾವಣೆ ಮುಂದೂಡಿಕೆ ಇಲ್ಲ ಎಂದು ಮೂಲಗಳು ತಿಳಿಸಿದ್ದಾಗಿ ndtv.com ವರದಿ ಮಾಡಿದೆ. ಒಮೈಕ್ರಾನ್ ಆತಂಕದ ಕಾರಣಕ್ಕಾಗಿ ವಿಧಾನ ಸಭೆ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳು ಮುಂದೂಡಿ ಎಂದು ಉತ್ತರಪ್ರದೇಶದ ನ್ಯಾಯಾಲಯ ಕೆಲವು ದಿನಗಳ ಹಿಂದೆ ಕೇಂದ್ರ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ಚುನಾವಣಾ ಆಯೋಗ ವೇಳಾಪಟ್ಟಿಗೆ ಬದ್ಧವಾಗಿರುವ ಹಾಗೂ ರಾಜ್ಯ ವಿಧಾನ ಸಭೆಯ ಅವಧಿ ಮುಗಿಯುವ ಮುನ್ನ ಚುನಾವಣೆ ನಡೆಸುವ ಸಾಂವಿಧಾನಿಕ ಆದೇಶವನ್ನು ಅನುಸರಿಸುವ ಸಾಧ್ಯತೆ ಇದೆ. ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ವಿಧಾನ ಸಭೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಗೋವಾ ವಿಧಾನ ಸಭೆಯ ಅವಧಿ ಮಾರ್ಚ್ 15ರಂದು, ಮಣಿಪುರ ವಿಧಾನ ಸಭೆಯ ಅವಧಿ ಮಾರ್ಚ್ 19ರಂದು ಹಾಗೂ ಉತ್ತರಪ್ರದೇಶ ವಿಧಾನ ಸಭೆಯ ಅವಧಿ ಮೇ 14ರಂದು ಅಂತ್ಯಗೊಳ್ಳಲಿದೆ.
ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೋಮವಾರ ಆರೋಗ್ಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆ ನಡೆಸಿದೆ. ಅಲ್ಲದೆ, ಕೋವಿಡ್ ಲಸಿಕೆ ನೀಡಿದ ಹಾಗೂ ಸೋಂಕಿನ ಪ್ರಮಾಣದ ಬಗ್ಗೆ ವಿವರ ಕೋರಿದೆ. ಕಠಿಣ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವ ಅಗತ್ಯತೆಯ ಬಗ್ಗೆ ಕೂಡ ಚುನಾವಣಾ ಆಯೋಗ ಚರ್ಚೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣಾ ಆಯೋಗ ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲು ಮಂಗಳವಾರ ಉತ್ತರಪ್ರದೇಶಕ್ಕೆ ಭೇಟಿ ನೀಡಲಿದೆ. ಚುನಾವಣೆ ಸಂದರ್ಭ ನಿಯೋಜನೆಗೆ ಸಂಬಂಧಿಸಿ ಅರೆ ಸೇನಾ ಪಡೆಯ ವರಿಷ್ಠರನ್ನು ಕೂಡ ಚುನಾವಣಾ ಆಯೋಗದ ಅಧಿಕಾರಿಗಳು ಭೇಟಿ ಮಾಡಲಿದ್ದಾರೆ.







